ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಯಾವುದೇ ಮಾನದಂಡವಿಲ್ಲದೆ ಆಂಗ್ಲಮಾಧ್ಯಮ ಆರಂಭಿಸುತ್ತಿರುವುದು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರಿ ಧಕ್ಕೆ ತಂದೊಡ್ಡಲಿದೆ ಎಂದು ಅಂಕಣಕಾರ, ಚಿಂತಕ ಮಹಾಬಲೇಶ್ವರ ರಾವ್ ಹೇಳಿದರು. ಅವರು ಕಾಸರಗೋಡು ನಗರಸಭಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಕೇರಳ ಪ್ರಾಂತ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದರು. ಇಂದು ಬಹುತೇಕ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಭೀತಿ ಎದುರಿಸುತ್ತಿದೆ. ಕನ್ನಡ ಭಾವದ ಭಾಷೆ ಮಾತ್ರವಲ್ಲ ಅನ್ನದ ಭಾಷೆ ಎಂಬ ಭಾವನೆ ಪ್ರತಿಯೊಬ್ಬನಲ್ಲಿ ಮೂಡಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು. ಮಲಯಾಳ ಭಾಷೆಯೊಂದಿಗೆ ಕನ್ನಡವನ್ನು ಬೆಳೆಸುವುದು ಜತೆಗೆ ಆಂಗ್ಲ ಭಾಷೆಯ ಪ್ರಭಾವದ ಮಧ್ಯೆ ಕನ್ನಡ ಶಾಲೆಗಳನ್ನು ಮುಂದುವರಿಸಿಕೊಂಡು ಹೋಗುವುದು ಗಡಿನಾಡಿನಲ್ಲಿ ಸವಾಲಿನ ಕೆಲಸವಾಗಿದೆ ಎಂದರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿ ಮಾತನಾಡಿ, ಭಾಷಾ ಸ್ನೇಹಿಗಳಾಗಿದ್ದ ಮಂಜೇಶ್ವರ ಗೋವಿಂದ ಪೈ, ನಾಡೋಜ ಡಾ.ಕಯ್ಯರ ಕಿಞಣ್ಣ ರೈ ಬಾಳಿಬದುಕಿದ ನೆಲದಲ್ಲಿ ಮಲಯಾಳದಷ್ಟೇ ಕನ್ನಡ ಭಾಷೆಗೂ ಪ್ರಾತಿನಿಧ್ಯವಿದ್ದು, ಈ ಬಗ್ಗೆ ಕನ್ನಡಿಗರಿಗೆ ಆತಂಕ ಬೇಡ. ಭಾಷಾ ಅಲ್ಪಸಂಖ್ಯಾತರ ಹಕ್ಕು ಸಂರಕ್ಷಣೆಗೆ ಸದಾ ಬದ್ಧನಿರುವುದಾಗಿ ತಿಳಿಸಿದರು. ಉದುಮ ಶಾಸಕ ಸಿ.ಎಚ್ ಕುಞಂಬು ಇದ್ದರು. ಕೇರಳ ಪ್ರಾಂತ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ.ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮಾಧ್ಯಮ ಶಾಲಾ ವ್ಯವಸ್ಥಾಪಕರ ಸಂಘದ ಅಧ್ಯಕ್ಷ ಜಯದೇವ ಖಂಡಿಗೆ, ನಿವೃತ್ತ ಶಿಕ್ಷಣ ಉಪ ನಿರ್ದೇಶಕ ನಂದಿಕೇಶನ್ ಉಪಸ್ಥಿತರಿದ್ದರು. ಸಂಘಟನೆ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಂಘಟನ ಕಾರ್ಯದರ್ಶಿ ಜಬ್ಬಾರ್ ಬಿ.ಹಾಗೂ ಸಂಚಾಲಕ ದಿವಾಕರ ಬಲ್ಲಾಳ್ ನಿರೂಪಿಸಿದರು. ಅಧಿಕೃತ ವಕ್ತಾರ ಸುಕೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಶಾಧಿಕಾರಿ ಶರತ್ ಕುಮಾರ್ ಎಂ.ವಂದಿಸಿದರು. ಈ ಸಂದರ್ಭ ಐದು ಕಥಾ ಪುಸ್ತಕಗಳ ಬಿಡುಗಡೆ, ಅಧ್ಯಾಪಕ ಸಂಘಟನೆ ಹೊರತಂದಿರುವ ಹೊಸವರ್ಷದ ಕ್ಯಾಲೆಂಡರ್ ಬಿಡುಗಡೆ, ವಿವಿಧ ವಿಷಯಗಳ ಬಗ್ಗೆ ವಿಚಾರಗೋಷ್ಠಿ, ಅಧ್ಯಾಪಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೂ ಮೊದಲು ಬೀರಂತಬೈಲು ಕನ್ನಡ ಅಧ್ಯಾಪಕರ ಭವನದಿಂದ ಚೆಂಡೆಮೇಳ, ಹುಲಿಕುಣಿತದೊಂದಿಗೆ ಭವ್ಯ ಮೆರವಣಿಗೆ ನಗರಸಭಾಂಗಣದ ವರೆಗೆ ಸಾಗಿಬಂದಿತ್ತು.