ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಯು.ಟಿ.ಖಾದರ್ ಸ್ಪೀಕರ್ ಆದ ಬಳಿಕ ಅಭಿವೃದ್ಧಿ ಕಾಮಗಾರಿಗಳು ನಿರಂತರ ನಡೆಯುತ್ತಿದ್ದು, ಕ್ಷೇತ್ರಕ್ಕೆ ಭರಪೂರ ಅನುದಾನ ಒದಗಿಸಿದ್ದಾರೆ ಎಂದು ನಗರಸಭಾ ಸದಸ್ಯ ಯು.ಪಿ.ಅಯೂಬ್ ಮಂಚಿಲ ಹರ್ಷ ವ್ಯಕ್ತಪಡಿಸಿದ್ದಾರೆ.
ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ 200 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು, ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಪ್ರತಿ ಮನೆಗೆ ನೀರು ಕೊಡಲು ಪೈಪ್‌ಲೈನ್ ಕಾಮಗಾರಿಗೆ 74 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಉಳ್ಳಾಲ ನಗರಸಭಾ ವ್ಯಾಪ್ತಿಯ ಮಂಚಿಲ 14ನೇ ವಾರ್ಡಿನ ತೊಕ್ಕೊಟ್ಟು ಒಳಪೇಟೆ, ಮಂಚಿಲ, ಸಹರಾ ರಸ್ತೆ, ಮಾರ್ಗತಲೆ, ಕಟ್ಟತಲೆ, ಪರಪು, ಹೊಯಿಗೆಹಿತ್ಲು ಕಡೆಗಳಲ್ಲಿ ಕಾಮಗಾರಿ ಪ್ರಾರಂಭಗೊಂಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಖಾದರ್ ಚುನಾವಣೆ ಸಂದರ್ಭ ನೀಡಿದ ಭರವಸೆಯಂತೆ ಮಾರ್ಗತಲೆಯ ಹೊಯಿಗೆಹಿತ್ಲಿನ ಹಿನ್ನೀರಿನ ಪ್ರದೇಶಕ್ಕೆ ತಡೆಗೋಡೆ ನಿರ್ಮಿಸಿದ್ದು ಇನ್ನೊಂದು ವಾರ್ಡಿನ ಹೊಯಿಗೆಹಿತ್ಲು ಹಿನ್ನೀರಿನ ಪ್ರದೇಶದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಕೆಲವು ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ. ಹಳೇಕೋಟೆಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಆಗಿದೆ. ಕೋಟೆಪುರದಿಂದ ಬೋಳಾರ ಸೇತುವೆ ನಿರ್ಮಾಣಕ್ಕೆ 200 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಉಳ್ಳಾಲ ಕೋಡಿ, ಕೋಟೆಪುರದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಮೀನುಗಾರಿಕೆ ಜೆಟ್ಟಿ, ವಿವಿಧ ವಾರ್ಡುಗಳಲ್ಲಿ ಕಾಮಗಾರಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಿಂದ 7 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ತೊಕ್ಕೊಟ್ಟು ಜಂಕ್ಷನ್, ಕೊಣಾಜೆ ರಸ್ತೆ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಮುಡಿಪುವಿನಲ್ಲಿ ಅಗ್ನಿಶಾಮಕ ದಳ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಅಮೃತ ನಗರೋತ್ಥಾನ ಯೋಜನೆಯಡಿ 30 ಕೋಟಿ ರೂ. ಅನುದಾನದಲ್ಲಿ ಉಳ್ಳಾಲ ನಗರಸಭಾ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿಯೂ ಕಾಮಗಾರಿ ಪ್ರಗತಿಯಲ್ಲಿದೆ. ಸಜಿಪದಿಂದ ತುಂಬೆ ಸೇತುವೆ ನಿರ್ಮಾಣಕ್ಕೆ 60 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿಯ ನಾಗಾಲೋಟದಲ್ಲಿದೆ ಎಂದರು.
ನಗರಸಭಾ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸ್ವಪ್ನಾ ಹರೀಶ್, ಮಂಚಿಲ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಶರೀಫ್, ಅಲ್ ಫುರ್ಕಾನ್ ಜುಮಾ ಮಸೀದಿಯ ಅಧ್ಯಕ್ಷ ಬಿ.ಎಚ್.ಫಾರೂಕ್, ಮಾರ್ಗತಲೆ ಜುಮಾ ಮಸೀದಿಯ ಉಪಾಧ್ಯಕ್ಷ ಹನೀಫ್, ತೊಕ್ಕೊಟ್ಟು ಸಂತ ಸೆಬೆಸ್ಟಿಯನ್ ಚರ್ಚ್ ಉಪಾಧ್ಯಕ್ಷ ಅರುಣ್ ಡಿಸೋಜ, ನಗರಸಭಾ ಸದಸ್ಯ ಅಝೀಝ್ ಕೋಡಿ, ಮೊಹಮ್ಮದ್ ಅಲಿ, ನವಾಝ್ ಮಾರ್ಗತಲೆ, ಮಾರ್ಗತಲೆ ಸಾಲ್ಯಾನ್ ಮೂಲಸ್ಥಾನದ ಅರ್ಚಕ ಮನೋಜ್ ಸ್ಟೋರ್ ಹೌಸ್ ಉಪಸ್ಥಿತರಿದ್ದರು.