ದುರಸ್ತಿ ನಿರೀಕ್ಷೆಯಲ್ಲಿ ಸರ್ಕಾರಿ ಶಾಲೆ, ಮೂಲಸೌಕರ್ಯ ಅವ್ಯವಸ್ಥೆ, ಬಿಡುಗಡೆಯಾಗದ ಅನುದಾನ

balve
ದುರಸ್ತಿಯ ಅಗತ್ಯ ಇರುವ ಬೆಳ್ವೆ ಶಾಲೆ
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಬೇಸಿಗೆ ರಜೆ ಮುಗಿದು ಶಾಲೆಗಳು ಮರು ಆರಂಭವಾಗಿದೆ. ಆದರೆ ಕೆಲವು ಸರ್ಕಾರಿ ಶಾಲೆ ಕಟ್ಟಡ ದುಸ್ಥಿತಿಯಲ್ಲಿದ್ದು, ದುರಸ್ತಿಗಾಗಿ ಕಾಯುತ್ತಿವೆ.
ಶಾಲೆ ತರಗತಿ ಕೊಠಡಿ, ಛಾವಣಿ, ಕಿಟಕಿ, ಬಾಗಿಲಿನ ದುರಸ್ತಿ ಶೀಘ್ರವಾಗಿ ಆಗಬೇಕಿದೆ. ಆವರಣಗೋಡೆ ಸೇರಿದಂತೆ ಕೆಲವೆಡೆ ಮೂಲ ಅವಶ್ಯಕತೆಗಳಿಗೆ ಸ್ಪಂದಿಸಬೇಕಿದೆ. ಪಠ್ಯಪುಸ್ತಕ, ಶೂ, ಬಿಸಿಯೂಟ ಕೊಡುವ ಸರ್ಕಾರ ಶಾಲಾ ಕಟ್ಟಡಗಳನ್ನು ಸುಸ್ಥಿತಿಯಲ್ಲಿ ಇಡಲು ಕಾಳಜಿ ವಹಿಸಬೇಕಿದೆ.

ಕುಂದಾಪುರ ಶೈಕ್ಷಣಿಕ ವಲಯದ ಹೆಬ್ರಿ ಹಾಗೂ ಕುಂದಾಪುರ ತಾಲೂಕಿನ 46 ಶಾಲೆಗಳಿಗೆ ದುರಸ್ತಿ ಕಾರ್ಯ ಅಗತ್ಯವಾಗಿದೆ. ಈ ಪೈಕಿ 31 ಶಾಲೆಗಳ ಛಾವಣಿ, 30 ಶಾಲೆಗಳ ನೆಲ ಸರಿಪಡಿಸಬೇಕಿದೆ. 4 ಶಾಲೆಗಳ ಕಿಟಕಿ, ಬಾಗಿಲುಗಳ ದುರಸ್ತಿಯಾಗಬೇಕಿದೆ. 16 ಶಾಲೆಗಳ ಗೋಡೆ ಸರಿಪಡಿಸಬೇಕಾಗಿದೆ. 1 ಶಾಲೆಯ ಅಡುಗೆ ಕೋಣೆ ದುರಸ್ತಿಯಾಗಬೇಕಿದೆ. ಚುನಾವಣೆ ಸಂದರ್ಭ ಅನೇಕ ಶಾಲೆಗಳು ಮತಗಟ್ಟೆಗಳು ಎಂಬ ನೆಲೆಯಲ್ಲಿ ದುರಸ್ತಿಗೆ ಒಳಗಾಗುತ್ತವೆ. ಅಲ್ಲದೆ ಸರ್ವಶಿಕ್ಷಾ ಅಭಿಯಾನ, ವಿವೇಕ ಕೊಠಡಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಕೊಠಡಿ ಮಂಜೂರಾತಿಯಾಗಿದೆ. ಗಂಭೀರ ಸಮಸ್ಯೆ ಹೊಂದಿದ ಶಾಲೆಗಳು ಇಲ್ಲ ಎನ್ನುವುದೇ ಸದ್ಯದ ಸಮಾಧಾನ.

ಕಟ್ಟಡ ಅವ್ಯವಸ್ಥೆ

46 ಶಾಲೆಗಳಲ್ಲಿ 5,377 ಮಕ್ಕಳು ಕಲಿಯಲಿದ್ದಾರೆ. ಸಿದ್ದಾಪುರ ಪ್ರೌಢಶಾಲೆಯಲ್ಲಿ 649, ಬಸ್ರೂರಿನಲ್ಲಿ 479, ಕುಂದಾಪುರ 460 ಮಕ್ಕಳಿದ್ದಾರೆ. ಅಂತೆಯೇ ಬಳ್ಮನೆಯಲ್ಲಿ 12, ಹರ್ಕಾಡಿಯಲ್ಲಿ 20, ಕೆಲಾ 17, ಮೂಡು ಹಾಲಾಡಿ 27, ಮಡಾಮಕ್ಕಿ 29 ಕಡಿಮೆ ಸಂಖ್ಯೆಯ ಮಕ್ಕಳ ಶಾಲೆಗಳೂ ಇವೆ. 243 ಶಿಕ್ಷಕರಿದ್ದಾರೆ. ಈ ಶಾಲೆಗಳಲ್ಲಿ 300 ಕೊಠಡಿಗಳು ಇವೆ. ಈ ಪೈಕಿ 138 ವ್ಯವಸ್ಥಿತವಾಗಿವೆ. 162 ಕೊಠಡಿಗಳ ದುರಸ್ತಿಯಾಗಬೇಕಿದೆ. 18 ಶಾಲೆಗಳಲ್ಲಿ ತುರ್ತು ದುರಸ್ತಿ ಅವಶ್ಯವಿದೆ.

ತುರ್ತು ಕಾಮಗಾರಿ

ಪ್ರೌಢಶಾಲೆಗಳಾದ ಯಡಾಡಿ ಮತ್ಯಾಡಿ, ಹೆಸ್ಕುತ್ತೂರು, ಸಿದ್ದಾಪುರ, ಕೆಲಾ, ಕೊಡಳ್ಳಿ, ಕೊಮೆ, ಕೆದೂರು, ಅಸೋಡು, ಬೇಳೂರು, ಬಡಾಕೆರೆ ಹಂಗಳೂರು, ಹಿರಿಯ ಪ್ರಾಥಮಿಕ ಶಾಲೆಗಳಾದ ಹೆಸ್ಕುತ್ತೂರು, ಮೂಡುಹಾಲಾಡಿ, ಕೊಡ್ಪಾಡಿ, ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಾದ ಶೇಡಿಮನೆ, ಆರ್ಡಿ, ಮಡಾಮಕ್ಕಿ, ಅಲ್ವಾಡಿ ಆರ್ಡಿ ಶಾಲೆಗಳಿಗೆ ತುರ್ತು ದುರಸ್ತಿ ಅಗತ್ಯವಿದೆ.

1.13 ಕೋಟಿ ರೂ. ಅಗತ್ಯ

ಶಾಲೆಗಳ ದುರಸ್ತಿಗೆ 1ರಿಂದ 5 ಲಕ್ಷ ರೂ.ವರೆಗೆ ಅನುದಾನ ಅವಶ್ಯವಿದೆ. ಒಟ್ಟು 45 ಶಾಲೆಗಳ ದುರಸ್ತಿಗೆ ಒಟ್ಟು 1.13 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಅನುದಾನ ಸರ್ಕಾರದಿಂದ ಬಿಡುಗಡೆಯಾಗುವುದೇ ಎನ್ನುವುದೂ ಸದ್ಯದ ಪ್ರಶ್ನೆ.

ಶಾಲೆಗಳ ದುರಸ್ತಿಗೆ ಸಂಬಂಧಿಸಿ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಅನುದಾನ ಕೋರಲಾಗಿದೆ. ಮಕ್ಕಳಿಗೆ ತೊಂದರೆಯಾಗದಂತೆ ಪಾಠ ಪ್ರವಚನ ನಡೆಯಲಿದೆ.-ಶೋಭಾ ಎಸ್.ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ, ಕುಂದಾಪುರ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net