

ಕೋಟ: ಮಕ್ಕಳು ಅತಿಯಾದ ಮೊಬೈಲ್ ಬಳಸದಂತೆ, ಪಠ್ಯೇತರ ಚಟುವಟಿಕೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಆಗ ವಿದ್ಯಾರ್ಥಿಗಳು ಸೋಲನ್ನು ಸ್ವೀಕರಿಸುವ ಗುಣ ಬೆಳಸಿಕೊಳ್ಳುತ್ತಾರೆ. ಯಾವುದೇ ಸಮಸ್ಯೆ ಎದುರಿಸುವ ಹಾಗೂ ಬಗೆಹರಿಸುವ ಹಂತಕ್ಕೆ ಬೆಳೆಯುತ್ತಾರೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ ಹೇಳಿದರು.
ವಿವೇಕ ಪದವಿಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ಹತ್ತನೇ ತರಗತಿ ವಿದ್ಯಾರ್ಥಿ ಪಾಲಕರ ಸಭೆ ಶನಿವಾರ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಮಾತನಾಡಿದರು.
ಪ್ರತಿ ವಿದ್ಯಾರ್ಥಿಯಲ್ಲಿ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪೋಷಿಸುವ ಕೆಲಸ ಶಿಕ್ಷಕರು ಹಾಗೂ ಪಾಲಕರಿಂದ ಆಗಬೇಕಾಗಿದೆ ಎಂದರು. ಹಿರಿಯ ಶಿಕ್ಷಕ ವೆಂಕಟೇಶ ಉಡುಪ ಸ್ವಾಗತಿಸಿ, ಹಿರಿಯ ಶಿಕ್ಷಕ ಪ್ರೇಮಾನಂದ ವಂದಿಸಿದರು.