ಹೋಟೆಲ್​ಗಳಿಗೆ ಉದ್ಯಮ ಮಾನ್ಯತೆ ನೀಡಲು ಸರ್ಕಾರ ಬದ್ಧ: ಎಂ.ಬಿ.ಪಾಟೀಲ್​ ಹೇಳಿಕೆ

M-B-Patil
Published on

ಬೆಂಗಳೂರು: ಹೋಟೆಲ್​ಗಳಿಗೆ ಉದ್ಯಮ ಮಾನ್ಯತೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಹೋಟೆಲ್​ಗಳ ಸಂಘ ಅರಮನೆ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹೋಟೆಲ್​ ಮಾಲೀಕರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೋಟೆಲ್​ಗಳನ್ನು ಬರೀ ಉದ್ಯಮವೆಂದು ಕರೆಯಲಾಗುತ್ತಿದೆ. ಆದರೆ, ಇದು ಕಾರ್ಯರೂಪಕ್ಕೆ ಬಂದಿಲ್ಲ.ಹೋಟೆಲ್​ಗಳಿಗೆ ಉದ್ಯಮವೆಂದು ಮಾನ್ಯತೆ ನೀಡುವುದಕ್ಕೆ ಸರ್ಕಾರ ಮುಂದಾಗುತ್ತಿದೆ. ಈ ಬಗ್ಗೆ ಪ್ರವಾಸೋದ್ಯಮ ಸಚಿವರ ಜತೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ಹೋಟೆಲ್​ ಉದ್ದಿಮೆಗಳು ಲಕ್ಷಾಂತರ ಉದ್ಯೋಗ ಸೃಷ್ಟಿ ಮಾಡಿವೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಉಡುಪಿ ಬ್ರ್ಯಾಂಡ್​​ ಹೋಟೆಲ್​ಗಳಿವೆ. ಉತ್ತರ ಕರ್ನಾಟಕ ಖಾನಾವಳಿ ಹೋಟೆಲ್​ಗಳಿವೆ. ಇವುಗಳನ್ನು ಉಳಿಸಿ ಬೆಳೆಸಲು ನಮ್ಮ ಆದ್ಯತೆಯಾಗಿದೆ ಎಂದರು.

2024ರಿಂದ 2026ರವರೆಗಿನ ಮಾರ್ಗಸೂಚಿ ಬಿಡುಗಡೆ ಮಾಡಲಾಯಿತು. ಹೋಟೆಲ್​ ಉದ್ದಿಮೆ ಎದುರಿಸುತ್ತಿರುವ ಸಮಸ್ಯೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಹೋಟೆಲ್​ ಉದ್ದಿಮೆದಾರರಾದ ಡಾ.ಕೆ. ಪ್ರಕಾಶ್​ ಶೆಟ್ಟಿ, ಆರ್​.ಆರ್​. ರಮಣರೆಡ್ಡಿ, ಎಂ.ರಾಜೇಂದ್ರ, ಬಿ.ಚಂದ್ರಶೇಖರ ಹೆಬ್ಬಾರ್​ ಅವರನ್ನು ಸನ್ಮಾನಿಸಲಾಯಿತು. ಶಾಸಕ ಪಿ.ಸುರೇಶ್​ ಶೆಟ್ಟಿ,ಸಂದ ಅಧ್ಯ ಜಿ.ಕೆ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾವೇಂದ್ರ ರಾವ್​,ಮಾಜಿ ಅಧ್ಯ ಸುಧಾಕರ್​ ಎಸ್​. ಶೆಟ್ಟಿ, ಹೋಟೆಲ್​ ಸಂದ ಜಿಲ್ಲಾವಾರು ಅಧ್ಯರು, ಉಪಾಧ್ಯರು, ಪದಾಧಿಕಾರಿಗಳು ಸೇರಿ ಮತ್ತಿತರರಿದ್ದರು.

ಕಲಬೆರಕೆ ಆಹಾರ ತಡೆಗೆ ಕ್ರಮ:

ಕಲಬೆರಕೆ ಆಹಾರ ತಡೆಗೆ ಆಹಾರ ಸುರತಾ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಾಗಿದೆ. ಹಾಗಾಗಿ, ಅಧಿಕಾರಿಗಳು ಹೋಟೆಲ್​ಗಳ ತಪಾಸಣೆ ಮಾಡುತ್ತಿದ್ದಾರೆ ಹೊರತು ಉದ್ದಿಮೆದಾರರಿಗೆ ತೊಂದರೆ ಕೊಡುತ್ತಿಲ್ಲ ಎಂದು ಸಚಿವ ದಿನೇಶ್​ ಗುಂಡೂರಾವ್​ ಹೇಳಿದರು. ಗುಣಮಟ್ಟ ಆಹಾರ ಒದಗಿಸುವುದು ಹೋಟೆಲ್​ಗಳ ಮಾಲೀಕರ ಕರ್ತವ್ಯ. ಸ್ವಚ್ಛತೆ ಕಾಪಾಡಿಕೊಂಡು ಗ್ರಾಹಕರಿಗೆ ಆಹಾರ ಒದಗಿಸಬೇಕು. ಕಲಬೆರಕೆ ಆಹಾರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಾನೂನು ಪ್ರಕಾರವೇ ಕ್ರಮ ತೆಗದುಕೊಳ್ಳಲಾಗುತ್ತಿದೆ. ನಾವೆಲ್ಲರೂ ಸೇರಿ ಕಲಬೆರಕೆ ವಿರುದ್ಧ ಅಭಿಯಾನ ನಡೆಸೋಣ ಎಂದರು.ದೇಶದ ಅನೇಕ ಮಂದಿ ಹೋಟೆಲ್​ಗಳ ಉದ್ದಿಮೆಯಲ್ಲಿ ತೊಡಗಿದ್ದಾರೆ. ವಿಶೇಷವಾಗಿ ಕರಾವಳಿಯವರು ಜಗತ್ತಿನಾದ್ಯಂತ ಹೋಟೆಲ್​ ಆರಂಭಿಸುವ ಮೂಲಕ ಒಳ್ಳೆಯ ಹೆಸರು ಮಾಡಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಲ ಹೋಟೆಲ್​ಗಳಿಗೆ ತನ್ನದೆ ಇತಿಹಾಸ, ಚರಿತ್ರೆಗಳಿವೆ. ಹೋಟೆಲ್​ ಮಾಲೀಕರು ಜನರಿಗೆ ಇನ್ನಷ್ಟು ಸೇವೆಗೆ ಮುಂದಾಗಬೇಕು. ಹೋಟೆಲ್​ ಉದ್ಯಮ ಇನ್ನಷ್ಟು ಲಾಭದಾಯಕವಾಗಿ ನಡೆಸುವಂತಾಗಲಿ.

| ರಾಮಲಿಂಗಾರೆಡ್ಡಿ. ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net