

ಅಥಣಿ: ಇಲ್ಲಿನ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೆ.2ರಂದು ಚುನಾವಣೆ ನಡೆಯಲಿದ್ದು, ಗದ್ದುಗೆಗಾಗಿ ತೀವ್ರ ಪೈಪೋಟಿ ನಡೆದಿದೆ. ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರಿಗೆ ಪ್ರತಿಷ್ಠೆಯ ಕಣವಾಗಿದ್ದು, ಶಾಸಕ ಲಕ್ಷ್ಮಣ ಸವದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಬಿಸಿ ತುಪ್ಪವಾಗಿ ಪರಿಣಿಮಿಸಿದೆ.
ಪುರಸಭೆಯ 27 ಸದಸ್ಯರಲ್ಲಿ 15 ಕಾಂಗ್ರೆಸ್, 9 ಬಿಜೆಪಿ ಹಾಗೂ 3 ಪಕ್ಷೇತರರು ಇದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಸೇರಿ ಲಕ್ಷ್ಮಣ ಸವದಿ ಅವರನ್ನು ಬೆಂಬಲಿಸಿದ್ದರು. ಎಲ್ಲರೂ ಕಾಂಗ್ರೆಸ್ ಕಡೆಗೆ ಇರುವುದರಿಂದ ಪುರಸಭೆ ಆಡಳಿತ ಸುಲಭವಾಗಿ ಕಾಂಗ್ರೆಸ್ಗೆ ಸಿಗಲಿದೆ. ಈಗ ಮೂಲ ಕಾಂಗ್ರೆಸಿಗರು ಹಾಗೂ ಸವದಿ ಬೆಂಬಲಿತರ ಮಧ್ಯೆ ಗದ್ದುಗೆ ಗುದ್ದಾಟ ಆರಂಭವಾಗಿದೆ.
ರೆಸಾರ್ಟ್ ಸೇರಿದ ಮೂಲ ಕಾಂಗ್ರೆಸ್ ಸದಸ್ಯರು: ಪುರಸಭೆಯ 15 ಕಾಂಗ್ರೆಸ್ ಸದಸ್ಯರು ಕಳೆದ ಒಂದು ವಾರದಿಂದ ಅಜ್ಞಾತ ಸ್ಥಳವೊಂದರ ರೆಸಾರ್ಟ್ನಲ್ಲಿ ಬೀಡು ಬಿಟ್ಟಿದ್ದಾರೆ. ನೇರವಾಗಿ ಸೆ.2ರಂದು ಆಗಮಿಸುವರು. 9 ವಲಸೆ (ಬಿಜೆಪಿ) ಮತ್ತು 3 ಪಕ್ಷೇತರು ಮಾತ್ರ ಅಥಣಿಯಲ್ಲಿದ್ದು ಶಾಸಕರನ್ನು ಭೇಟಿಯಾಗಿ ಮುಂದಿನ ನಡೆ ಕುರಿತು ಚರ್ಚಿಸುತ್ತಿದ್ದಾರೆ. ಮೂಲ ಕಾಂಗ್ರೆಸ್ನ ಶಿವಲೀಲಾ ಬುಟಾಳೆ, ವಿದ್ಯಾ ಐಹೊಳೆ, ಜುಲೈಕಾ ಖೇಮಲಾಪುರ ಆಕಾಂಕ್ಷಿಗಳಾಗಿದ್ದಾರೆ. ಸವದಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಶಾಂತಾ ಲೋಣಾರೆ, ಲತಾ ಭಜಂತ್ರಿ ಆಕಾಂಕ್ಷಿಗಳಾಗಿದ್ದಾರೆ. ಶಾಸಕರು, ಸಂಸದರ ಮತ ಸೇರಿ 29 ಮತಗಳಿವೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನವು ಹಿಂದುಳಿದ 2ಅ ವರ್ಗ ಮಹಿಳೆ ಮೀಸಲಾತಿ ನಿಗದಿಯಾಗಿದೆ.