

-ಹರಿಪ್ರಸಾದ್ ನಂದಳಿಕೆ ಕಾರ್ಕಳ
ಮಳೆಗಾಲದಲ್ಲಿ ಸುರಿಯುವ ಜಡಿ ಮಳೆಯ ಸಂದರ್ಭಗಳಲ್ಲಿ ಗದ್ದೆಯ ಉಳುಮೆ, ನಾಟಿ, ತೋಟದ ಕೆಲಸ ಹೀಗೆ ಕೃಷಿ ಚಟುವಟಿಕೆಗಳಲ್ಲಿ ರೈತರನ್ನು ಬೆಚ್ಚಗಿಡುತ್ತಿದ್ದು ಒಂದು ಕಾಲದಲ್ಲಿ ಬೇಸಾಯ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಗೊರಬು ಇದೀಗ ಕಣ್ಮರೆಯಾಗಿದೆ.
ತುಳುನಾಡು, ಮಲೆನಾಡಿನಲ್ಲೂ ಕೃಷಿ ಭೂಮಿಯಲ್ಲಿ ಅಲ್ಲಲ್ಲಿ ಕಾಣಸಿಗುತ್ತಿದ್ದ ಗೊರಬು ಅಪರೂಪವಾಗಿದ್ದು, ಗೊರಬು, ಗೊರಗ ಅಥವಾ ತುಳುವಿನ ಕೊರಂಬು ಎಂದೆಲ್ಲಾ ಹೆಸರಿರುವ ಈ ಪರಿಕರ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಮಾರುಕಟ್ಟೆಗೆ ಕಡಿಮೆ ಬೆಲೆಯ ಪ್ಲಾಸ್ಟಿಕ್ ಹೊದಿಕೆ ಬರತೊಡಗಿದ್ದು, ಇದರ ಪರಿಣಾಮ ಕೃಷಿಕರ ಮನೆಯಲ್ಲಿ ಕಾಣ ಸಿಗುತ್ತಿದ್ದ ಗೊರಬು ಇದೀಗ ಮಾಯವಾಗಿದೆ. ತುಳುನಾಡು ಹಾಗೂ ಮಳೆನಾಡಿನ ಕೃಷಿ ಭೂಮಿಯಲ್ಲಿ ಕಾಣಸಿಗುತ್ತಿದ್ದ ಗೊರಬಿಗೆ ಶತಮಾನಗಳ ಇತಿಹಾಸ ಇದೆ. ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿರುವ ರೈತಾಪಿ ಜನರನ್ನು ಮಳೆಯಿಂದ ರಕ್ಷಿಸಿ ಬೆಚ್ಚಗಿಡುತ್ತಿತ್ತು ಈ ಗೊರಬು.
ಗೊರಬನ್ನು ತಾಳೆ ಮರದ ಅಥವಾ ಈಚಲು ಮರದ ಒಣಗಿದ ಎಲೆಗಳು ಹಾಗೂ ಕೆಲವು ಭಾಗದಲ್ಲಿ ಧೂಪದ ಮರದ ಎಲೆ ಬಳಸಿ ಸುಂದರವಾಗಿ ತಯಾರಿಸಲಾಗುತ್ತದೆ. ಅವಿಭಜಿತ ದ.ಕ. ಹಾಗೂ ಉಡುಪಿ ಜಿಲ್ಲೆ ಸೇರಿದಂತೆ ಮಳೆನಾಡು ಭಾಗದಲ್ಲಿ ಗೊರಬು ತಯಾರಿಕೆ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬೆರಳೆಣಿಕೆಯ ಮಂದಿ ಮಾತ್ರ ಈ ಕಸುಬನ್ನು ಮಾಡುತ್ತಿದ್ದಾರೆ. ಉಡುಪಿಯ ಕುಂದಾಪುರ, ಕಾರ್ಕಳ, ಹೆಬ್ರಿಯ ಹಾಗೂ ದ.ಕ. ಜಿಲ್ಲೆಯ ಬೆಳ್ತಂಗಡಿ, ಧರ್ಮಸ್ಥಳ, ಚಾರ್ಮಾಡಿ, ನೆಲ್ಯಾಡಿ ಮತ್ತು ಮಳೆನಾಡಿನ ತೀರ್ಥಹಳ್ಳಿ, ಚಿಕ್ಕಮಗಳೂರು, ಮೂಡಿಗೆರೆ ಹೀಗೆ ಕೆಲವೊಂದು ಗ್ರಾಮೀಣ ಭಾಗದಲ್ಲಿ ಗೊರಬು ತಯಾರಿಸುತ್ತಿದ್ದರು.
ಗೊರಬು ಮೂರು-ನಾಲ್ಕು ವರ್ಷದವರೆಗೂ ಬಾಳಿಕೆ ಬರುತ್ತದೆ. ಮಳೆಗಾಲದಲ್ಲಿ ಉಪಯೋಗಿಸಿ ಬಳಿಕ ಸುರಕ್ಷಿತವಾಗಿ ಇಡಲಾಗುತ್ತದೆ. ಗೊರಬು ತಯಾರಿಕೆಗೆ ಬೇಕಾದ ಪೂರಕ ಕಾಡಿನಲ್ಲಿ ದೊರಕುತ್ತಿಲ್ಲ. ಅರಣ್ಯ ನಾಶದಿಂದ ಕಚ್ಚಾವಸ್ತುಗಳ ಕೊರತೆಯುಂಟಾಗಿದೆ. ಅಲ್ಲದೆ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕಾಡುಗಳಿಂದ ಕಚ್ಚಾ ವಸ್ತುಗಳನ್ನು ತರಲು ಅವಕಾಶವಿಲ್ಲ. ಕಡಿಮೆ ಬೆಲೆ ಮತ್ತು ಸುಲಭವಾಗಿ ಲಭಿಸುವ ರೈನ್ ಕೋಟ್, ಕೊಡೆ, ಪ್ಲಾಸ್ಟಿಕ್ ಕೊಪ್ಪೆಗಳು, ಗೊರಬಿನಾಕೃತಿಯಲ್ಲಿಯೇ ಹೊಲಿದ ರೆಡಿಮೇಡ್ ಕವಚಗಳಿಗೆ ಜನ ಆಕರ್ಷಿತರಾಗಿ ಗೊರಬು ಬೇಡಿಕೆ ಕಳೆದುಕೊಂಡಿದೆ.
ಹತ್ತು ವರ್ಷದ ಹಿಂದೆ 400-500 ರೂಪಾಯಿಗೆ ದೊರಕುತ್ತಿದ್ದ ಗೊರಬು ಇಂದು ಸಾವಿರದ ಗಡಿ ದಾಟಿದೆ. ಬುಟ್ಟಿ, ಗೊರಬು, ಮಣ್ಣಿನ ಪಾತ್ರೆ ಹೀಗೆ ಅನೇಕ ರೀತಿಯಾದ ಕುಲಕಸಬುಗಳಿಗೆ ಸರ್ಕಾರ ಪ್ರೋತ್ಸಾಹ ನೀಡಿದಲ್ಲಿ ಮಾತ್ರ ಗೊರಬಿನಂತಹ ವಸ್ತುಗಳು ಯುವ ಪೀಳಿಗೆಗೆ ಪರಿಚಯವಾಗಬಹುದು.
ಕಳೆದ ಹಲವು ವರ್ಷಗಳ ಹಿಂದೆ ನಮ್ಮ ಗದ್ದೆಯಲ್ಲಿ ನಾಟಿ ಮಾಡುವಾಗ ಮಹಿಳೆಯರು ಗೊರಬನ್ನೇ ಉಪಯೋಗಿಸುತ್ತಿದ್ದರು. ಆದರೆ ಕಾಲ ಕಳೆದಂತೆ ಇಂದು ಗದ್ದೆಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳೇ ಹೆಚ್ಚಾಗಿ ಕಾಣಸಿಗುತ್ತಿದೆ.-ಸುಧಾಕರ್ ಶೆಟ್ಟಿ, ಕೃಷಿಕರು
ಮೊದಲು ಕೃಷಿ ಚಟಿವಟಿಕೆಯಲ್ಲಿ ಕೂಲಿ ಕಾರ್ಮಿಕರು ಗೊರಬನ್ನೇ ಬಳಸುತ್ತಿದ್ದರು ಆದರೆ ಇಂದು ಎಲ್ಲವೂ ಯಾಂತ್ರೀಕೃತವಾಗಿ ಗದ್ದೆಯಲ್ಲಿ ಗೊರಬು ನೋಡಲು ಸಿಗುವುದೇ ಅಪರೂಪ. ಜತೆಗೆ ಗೊರಬು ತಯಾರಿಸುವವರೂ ಈಗ ವಿರಳವಾಗಿದ್ದಾರೆ.-ಶಾಂತ ಪೂಜಾರ್ತಿ, ಕೃಷಿಕರು
ಹಿಂದೆ ಕೃಷಿ ಕುಟುಂಬದ ಮನೆಯಲ್ಲಿ ಗೊರಬುಗಳು ಸರ್ವೆ ಸಾಮಾನ್ಯವಾಗಿ ಕಾಣಸಿಗುತ್ತಿದ್ದವು. ಆದರೆ ಇಂದು ಗೊರಬು ಮಾಯವಾಗಿದೆ. ಪ್ಲಾಸ್ಟಿಕ್ ಕವರ್ ನಡುವೆ ಗೊರಬು ನೇಪಥ್ಯಕ್ಕೆ ಸರಿದಂತಿದೆ.-ರವಿರಾಜ್, ಯುವ ಕೃಷಿಕ ಕಾರ್ಕಳ