ಈ ಫ್ಲೆಕ್ಸ್​ನಲ್ಲಿ ಗಾಂಧಿ-ಶಾಸ್ತ್ರಿ ಭಾವಚಿತ್ರ ಹುಡುಕಿಕೊಟ್ಟವರಿಗೆ ಬಹುಮಾನ!

troll
Published on

ತುಮಕೂರು: ಏನೋ ಮಾಡಲು ಹೋಗಿ ಇನ್ನೇನೋ ಮಾಡಿದ್ರೆ ಆಗೋದೆ ಬೇರೆ ಎಂಬ ಮಾತು ಜಿಲ್ಲಾ ಕಾಂಗ್ರೆಸ್​ಗೆ ಸಂಬಂಧಸಿದ ಫ್ಲೆಕ್ಸ್​ಗೆ ಅಕ್ಷರಶಃ ಅನ್ವಯಿಸುತ್ತೆ. ಎರಡು ದಿನದ ಹಿಂದೆ ನಗರದಾದ್ಯಂತ ಹಾಕಲಾಗಿದ್ದ ಪಕ್ಷದ ಮುಖಂಡರ ಭಾವಚಿತ್ರವುಳ್ಳ ಫ್ಲೆಕ್ಸ್​ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಸಾಸಲು ಸತೀಶ್ ಅಧಿಕಾರ ಸ್ವೀಕಾರ ಸಮಾರಂಭ ಇತ್ತು. ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್​ನಿಂದ ನಗರದಲ್ಲಿ ಫ್ಲೆಕ್ಸ್​ ಹಾಕಲಾಗಿತ್ತು. ಅಲ್ಲೇ ನೋಡಿ ಆಗಿದ್ದು ಯಡವಟ್ಟು. ಯಾರ ಜಯಂತಿ ಪ್ರಯುಕ್ತ ಫ್ಲೆಕ್ಸ್​ ಹಾಕಲಾಗಿತ್ತೋ ಅದರಲ್ಲಿ ಅವರ ಭಾವಚಿತ್ರಗಳೇ ಇರಲಿಲ್ಲ. ಬದಲಿಗೆ ಕಾಂಗ್ರೆಸ್​ ಮುಖಂಡರ ಫೋಟೋಗಳೇ ರಾರಾಜಿಸುತ್ತಿದ್ದವು. ಗಾಂಧಿ ಮತ್ತು ಶಾಸ್ತ್ರಿ ಅವರ ಭಾವಚಿತ್ರ ಹಾಕುವುದನ್ನೇ ಜಿಲ್ಲಾ ಕಾಂಗ್ರೆಸ್​ ಮರೆತಿತ್ತು.

ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರುಗಳಿಂದ ತುಂಬಿಹೋಗಿರುವ ಫ್ಲೆಕ್ಸ್ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕೆಲವರು ಗಾಂಧಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರ ಹುಡುಕಿಕೊಟ್ಟವರಿಗೆ ಬಹುಮಾನ ಎಂದು ಕಾಂಗ್ರೆಸ್ ಪಕ್ಷದ ಕಾಲೆಳೆದಿದ್ದಾರೆ. ಅಲ್ಲದೆ ಕಾಂಗ್ರೆಸ್ ನಡೆಯ ಬಗ್ಗೆ ತೀವ್ರ ವ್ಯಂಗ್ಯವಾಡಿರುವ ಟ್ರೋಲಿಗರು, ರಾಷ್ಟ್ರಪಿತ ಗಾಂಧೀಜಿ ಬಗ್ಗೆ ಉದ್ದುದ್ದ ಭಾಷಣ ಮಾಡುವ ಕಾಂಗ್ರೆಸ್ಸಿಗರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net