

ಬೆಂಗಳೂರು: ಡ್ರಗ್ಸ್ ಕೇಸ್ ಸಂಬಂಧ ಮಂಗಳೂರಿನ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡುತ್ತಿದ್ದಂತೆ ನಿರೂಪಕಿ ಅನುಶ್ರೀ ಅವರು ಮಾಜಿ ಮುಖ್ಯಮಂತ್ರಿ, ಮಾಜಿ ಸಿಎಂ ಪುತ್ರ ಸೇರಿ ರಾಜ್ಯದ ಮೂವರು ಪ್ರಭಾವಿ ನಾಯಕರಿಗೆ ಫೋನ್ ಮಾಡಿದ್ದರು ಎಂಬ ಸುದ್ದಿ ಶುಕ್ರವಾರ ಹರಿದಾಡಿತ್ತು.
ಅನುಶ್ರೀ ಪ್ರಕರಣದಲ್ಲಿ 'ಮಾಜಿ ಸಿಎಂ' ಪದಬಳಕೆ ಬಗ್ಗೆ ಶನಿವಾರ ಕೆಂಡಾಮಂಡಲವಾದ ಎಚ್.ಡಿ. ಕುಮಾರಸ್ವಾಮಿ, ''ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದವ ನಾನು. ಮಾಜಿ ಮುಖ್ಯಮಂತ್ರಿಗಳಲ್ಲಿ ನಾನು, ಸಿದ್ದರಾಮಯ್ಯ, ಎಸ್ಎಂಕೆ, ಮೊಯ್ಲಿ, ಜಗದೀಶ ಶೆಟ್ಟರ್, ಡಿವಿಎಸ್ ಇನ್ನೂ ಬದುಕಿದ್ದೇವೆ. ಆ ಹೆಣ್ಣು ಮಗಳು(ಆ್ಯಂಕರ್ ಅನುಶ್ರೀ) ಯಾವ ಮಾಜಿ ಸಿಎಂ ಜತೆ ಮಾತನಾಡಿದ್ದಾರೆ ಎಂದು ಬಹಿರಂಗವಾಗಬೇಕು'' ಎಂದು ಆಗ್ರಹಿಸಿದರು.
''ಡ್ರಗ್ಸ್ ಕೇಸ್ ಸಂಬಂಧ ಸಿಸಿಬಿ ನೋಟಿಸ್ ನೀಡುತ್ತಿದ್ದಂತೆ ಅನುಶ್ರೀ ಅವರು ರಾಜ್ಯದ ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿದ್ದರು ಎಂಬ ಮಾಹಿತಿಯನ್ನು ವರದಿಗಾರನಿಗೆ ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ನಾಯಕ್ ಎಂಬುವವರು ಕೊಟ್ಟಿದ್ದಾರೆ ಎನ್ನಲಾಗಿದೆ. ಅವರನ್ನು ಶನಿವಾರ ಬೆಳಗ್ಗೆ ಟ್ರಾನ್ಸ್ಫರ್ ಮಾಡಲಾಗಿತ್ತು. ಈ ಅಧಿಕಾರಿಯನ್ನು ವಿಚಾರಣೆ ಮಾಡಿ, ಆ ಮಾಜಿ ಸಿಎಂ ಯಾರೆಂದು ಬಾಯಿಬಿಡಿಸಿ. ಒತ್ತಡ ತಂದ ಮಾಜಿ ಸಿಎಂ ವಿರುದ್ಧ ಕ್ರಮ ತೆಗೆದುಕೊಳ್ಳಿ'' ಎಂದು ಆಗ್ರಹಿಸಿದರು.