

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ನೂತನ ಕಟ್ಟಡದ ಕಾಮಗಾರಿ ಭರದಿಂದ ನಡೆದು ಅಂತಿಮ ಹಂತ ತಲುಪಿದೆ.
ಕಡಬ ತಾಲೂಕಿನಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಸುಳ್ಯ ವೃತ್ತ ವ್ಯಾಪ್ತಿಯ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹೊಸ ಕಟ್ಟಡ ನಿರ್ಮಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ಅದರಂತೆ ಸರ್ಕಾರ ಅನುದಾನ ಮಂಜೂರು ಮಾಡಿ, ಕಾಮಗಾರಿ ಆರಂಭಿಸಲಾಗಿತ್ತು. ಸುಬ್ರಹ್ಮಣ್ಯ ಪೊಲೀಸ್ ಠಾಣೆ ಸುಮಾರು 15 ಗ್ರಾಮಗಳ ವ್ಯಾಪ್ತಿಯನ್ನೊಳಗೊಂಡಿದ್ದು, ಇವುಗಳಲ್ಲಿ ಕೆಲವು ಗ್ರಾಮಗಳು ನಕ್ಸಲ್ ಬಾಧಿತ ಗ್ರಾಮಗಳಾಗಿವೆ. ಇಷ್ಟು ವಿಸ್ತೃತವಾದ ಪ್ರದೇಶಗಳನ್ನು ಹೊಂದಿದ್ದರೂ ಹಳೇ ಠಾಣಾ ಕಟ್ಟಡದಿಂದ ಪೊಲೀಸರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು ತ್ರಾಸವಾಗುತ್ತಿತ್ತು. ಸದ್ಯ ನೂತನ ಕಟ್ಟಡಕ್ಕೆ ಕುಕ್ಕೆಯ ಪೊಲೀಸ್ ಠಾಣೆ ಸ್ಥಳಾಂತರಕ್ಕೆ ದಿನಗಣನೆ ಆರಂಭವಾಗಿದೆ.
ರಾಜ್ಯ ವಸತಿ ಮತ್ತು ಮೂಲಸೌಲಭ್ಯ ನಿಗಮ ನಿಯಮಿತ ವತಿಯಿಂದ ಮಂಜೂರುಗೊಂಡಿದ್ದ 1.23 ಕೋಟಿ ರೂ.ವೆಚ್ಚದಲ್ಲಿ ಹೊಸ ಪೊಲೀಸ್ ಠಾಣಾ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಸುಸಜ್ಜಿತ ವ್ಯವಸ್ಥೆಗಳೊಂದಿಗೆ ಕಟ್ಟಡ ನಿರ್ಮಾಣ ಆಗುತ್ತಿದೆ. ಹೊಸ ಕಟ್ಟಡದಲ್ಲಿ ಪೊಲೀಸ್ ಉಪನಿರೀಕ್ಷಕರ ಕೊಠಡಿ, ಸಹಾಯಕ ಉಪನಿರೀಕ್ಷಕರ ಕೊಠಡಿ, ಲಾಕ್‌ಅಪ್, ಕರ್ತವ್ಯ ಕಚೇರಿ, ಸಂದರ್ಶಕರ ಕಚೇರಿ, ದಾಖಲೆ ಸಂಗ್ರಹ ಕಚೇರಿ, ಪುರುಷ ಹಾಗೂ ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಶೌಚಗೃಹ, ಸ್ನಾನಗೃಹ, ಒಂದು ಗೊಡೌನ್ ಮತ್ತಿತರ ಕೊಠಡಿಗಳು ಇರಲಿದೆ.
2023ರ ಜನವರಿಯಲ್ಲಿ ಪೊಲೀಸ್ ಠಾಣೆಯ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು, ಉಡುಪಿ ಮೂಲದ ನಿರ್ಮಾಣ ಸಂಸ್ಥೆಯವರು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಪೊಲೀಸ್ ಠಾಣೆಯ ಕಟ್ಟಡ ಕಾಮಗಾರಿ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಕಟ್ಟಡ ಮುಂಭಾಗ ಇಂಟರ್‌ಲಾಕ್ ಅಳವಡಿಕೆ ಹಾಗೂ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವೇ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಸುಬ್ರಹ್ಮಣ್ಯದಲ್ಲಿ ಪೊಲೀಸ್ ಠಾಣೆಯನ್ನು 1972ರಲ್ಲಿ ತೆರೆಯಲಾಗಿದ್ದು, 1979ರಲ್ಲಿ ಇದರ ಈಗಿರುವ ಕಟ್ಟಡವನ್ನು ಅಂದಿನ ಪೊಲೀಸ್ ಮಹಾನಿರೀಕ್ಷಕರು ಉದ್ಘಾಟಿಸಿದ್ದರು. 2001ರಲ್ಲಿ ಊರ ದಾನಿಗಳ ಸಹಕಾರದಿಂದ ಹೆಚ್ಚುವರಿ ಕೊಠಡಿ ನಿರ್ಮಿಸಲಾಗಿತ್ತು. ಈ ಕಟ್ಟಡ ಹಳೆಯದಾಗಿದ್ದುದರಿಂದ ಕಟ್ಟಡ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಸೋರುತ್ತಿತ್ತು.ಸೋರಿಕೆ ತಡೆಯಲು ಮೇಲ್ಛಾವಣಿಗೆ ಟಾರ್ಪಲ್ ಹೊದಿಸಲಾಗುತ್ತಿತ್ತು. ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಹಲವು ವರ್ಷಗಳಿಂದ ಸ್ಥಳೀಯರು ಒತ್ತಾಯಿಸುತ್ತ ಬಂದಿದ್ದರು.ಇದೆಲ್ಲರ ನಡುವೆ ಸರ್ಕಾರ ಅನುದಾನ ನೀಡಿ ಹೊಸ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಕ್ರಮಕೈಗೊಂಡಿತ್ತು. ಅದರಂತೆ ಮುಂದಿನ ಕೆಲ ತಿಂಗಳಲ್ಲೇ ಪೊಲೀಸರಿಗೆ ಹೊಸ ಕಟ್ಟಡದಲ್ಲಿ ಕೆಲಸ ನಿರ್ವಹಿಸುವ ಸಮಯ ಬಂದೊದಗಲಿದೆ.