

ಕಲಬುರಗಿ: ಉತ್ತರ ಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯಿಂದಾಗಿ ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ಅಂತಿಮಯಾತ್ರೆ ಕೂಡ ನೆರೆಯಲ್ಲೇ ಸಾಗುವಂತಾಗಿದೆ.
ಕಲಬುರಗಿ ಜಿಲ್ಲೆಯಾದ್ಯಂತೆ ಭಾರಿ ಮಳೆ ಸುರಿದಿದ್ದು, ಬಹುತೇಕ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಅಂಥ ತುಂಬಿ ಹರಿಯುವ ಹಳ್ಳದಲ್ಲೇ ಜನರು ಜೀವದ ಹಂಗು ತೊರೆದು ಪಾರ್ಥಿವ ಶರೀರವನ್ನು ಸ್ಮಶಾನದತ್ತ ಕೊಂಡೊಯ್ಯುವ ದೃಶ್ಯ ಕಂಡುಬಂದಿದೆ.
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಚಿಂಚೋಳಿ (ಎಚ್) ಗ್ರಾಮದಲ್ಲಿ ಈ ವಿದ್ಯಮಾನ ಕಾಣಿಸಿದೆ. ಇಲ್ಲಿನ ಹಳೆಯ ಸೇತುವೆ ಮಳೆಗೆ ಪದೇಪದೆ ಮುಳುಗುತ್ತಿದ್ದರಿಂದ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಆದರೆ ಕಾಮಗಾರಿ ಆರಂಭವಾಗಿ ವರುಷ ಕಳೆದರೂ ಪೂರ್ಣಗೊಳ್ಳದ್ದರಿಂದ ಹಳೆಯ ಸೇತುವೆ ಮೇಲೆಯೇ ಜನರು ರಿಸ್ಕ್ ತೆಗೆದುಕೊಂಡು ಓಡಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.