

ನೆಲಮಂಗಲ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷರಿಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ಕೆನ್ನೆಗೆ ಹೊಡೆದಿದ್ದಾರೆ ಎನ್ನಲಾಗಿದ್ದು, ಪೊಲೀಸ್ ಠಾಣೆ ಮುಂದೆ ವಿವಿಧ ಕನ್ನಡಪರ ಸಂಘಟನೆಗಳವರು ಪ್ರತಿಭಟನೆ ನಡೆಸಿದ್ದಾರೆ. ಮಾತ್ರವಲ್ಲ ಪೊಲೀಸರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಪ್ರವೀಣ್ಕುಮಾರ್ ಶೆಟ್ಟಿ ಅವರ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಉಮೇಶ್ ಗೌಡ ಅವರಿಗೆ ನೆಲಮಂಗಲ ಪಟ್ಟಣ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುರೇಶ್ ಅವರು ಕೆನ್ನೆಗೆ ಬಾರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ರಂಗಸ್ವಾಮಿ ಹಾಗೂ ಲೋಕೇಶ್ ಎಂಬ ಆರೋಪಿಗಳನ್ನು ಮಾತನಾಡಿಸಲು ಪೊಲೀಸರ ಅನುಮತಿ ಪಡೆಯದೆ ಒಳಪ್ರವೇಶಿಸಿದ್ದರು ಎಂಬ ಕಾರಣಕ್ಕೆ ಘರ್ಷಣೆ ಉಂಟಾಗಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ವಾಗ್ವಾದ ವಿಕೋಪಕ್ಕೆ ತೆರಳಿ ಕಪಾಳಮೋಕ್ಷ ಮಾಡಲಾಗಿದೆ ಎಂದು ಕರವೇ ಮುಖಂಡರು ಆರೋಪಿಸಿದ್ದಾರೆ.
ಕಪಾಳಮೋಕ್ಷ ಪ್ರಕರಣದ ಸುದ್ದಿ ಹರಡುತ್ತಿದ್ದಂತೆ ಠಾಣೆ ಬಳಿ ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಮುಖಂಡರು ಜಮಾಯಿಸಿದ್ದು, ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಸದ್ಯ ಸಂಧಾನ ಯತ್ನ ನಡೆಯುತ್ತಿದೆ.
ಕನ್ನಡಪರ ಹೋರಾಟಗಾರರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಪೊಲೀಸರು ಈ ರೀತಿ ಹಲ್ಲೆ ನಡೆಸಬಾರದಿತ್ತು. ಈ ವಿಚಾರದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುತ್ತೇವೆ. ಪಿಎಸ್‌ಐ ಸುರೇಶ್ ಮೇಲೆ ಸೂಕ್ತ ಕ್ರಮಕೈಗೊಂಡು ಅಮಾನತು ಪಡಿಸುವಂತೆ ಒತ್ತಾಯಿಸುತ್ತೇವೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ.
| ಪ್ರವೀಣ್ಕುಮಾರ್ ಶೆಟ್ಟಿ ಕರ್ನಾಟಕ ರಕ್ಷಣಾ ವೇದಿಕೆ