

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿನ ಪ್ರಮಾಣ ಮಾತ್ರವಲ್ಲದೆ, ಸೋಂಕಿನಿಂದಾಗಿ ಮೃತಪಡುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಕರೊನಾಗೆ ಲಸಿಕೆ ಸಿಕ್ಕ ಬಳಿಕವೂ, ಸಾಕಷ್ಟು ಜನರು ಲಸಿಕೆ ತೆಗೆದುಕೊಳ್ಳುತ್ತಿರುವ ನಡುವೆಯೂ ಹೀಗೆ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ. ಮಾತ್ರವಲ್ಲ ಸರ್ಕಾರ ಹಾಗೂ ಕರೊನಾ ವಾರಿಯರ್ಸ್ಗೆ ಇದು ತಲೆನೋವಾಗಿ ಪರಿಣಮಿಸುತ್ತಿದೆ.
ಸಾಕಷ್ಟು ಮುನ್ನೆಚ್ಚರಿಕೆ ಕ್ರಮ, ನಿರ್ಬಂಧ ಹಾಗೂ ಲಸಿಕೆ ನೀಡಿಕೆ ಅಭಿಯಾನದ ಮಧ್ಯೆಯೂ ರಾಜ್ಯದಲ್ಲಿ ಇಂದು ಹೊಸದಾಗಿ 14,738 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಅದರಲ್ಲೂ ಇಡೀ ರಾಜ್ಯದ ಸೋಂಕಿನ ಪ್ರಮಾಣದ ಸಿಂಹಪಾಲು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಪತ್ತೆಯಾಗಿರುವುದು ಭೀತಿಯನ್ನು ಹೆಚ್ಚಿಸಿದೆ.
ರಾಜ್ಯದಲ್ಲಿ ಇಂದು ಹೊಸದಾಗಿ ಒಟ್ಟು 14,738 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದರೆ, ಅದರಲ್ಲಿ ಬೆಂಗಳೂರಿನಲ್ಲೇ 10 ಸಾವಿರ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಬೆಂಗಳೂರಿನಲ್ಲಿ ಕರೊನಾ ಎರಡನೇ ಅಲೆಯಲ್ಲಿ ಇದೇ ಮೊದಲ ಸಲ 10 ಸಾವಿರ ಕೇಸ್ ದಾಖಲಾದಂತಾಗಿದೆ. ಇಂದು ರಾಜ್ಯದಲ್ಲಿ ಕರೊನಾ ಸೋಂಕಿನಿಂದಾಗಿ 66 ಮಂದಿ ಮೃತಪಟ್ಟಿದ್ದಾರೆ.