ರುಂಡ-ಮುಂಡ ಬೇರೆ ಮಾಡಿ ಸೇಡು ತೀರಿಸಿಕೊಂಡರು; ಚಿಕ್ಕಪ್ಪನ ಮೇಲಿನ ದ್ವೇಷಕ್ಕೆ ಮಗನ ಕೊಲೆ

Murder
ಕೊಲೆಯಾದ ರಾಘವೇಂದ್ರ
Published on

ಬೆಂಗಳೂರು: ಚಿಕ್ಕಪ್ಪನ ಮೇಲಿನ ಹಳೇ ದ್ವೇಷಕ್ಕಾಗಿ ಮಗನನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ರುಂಡ- ಮುಂಡ ಬೇರೆ ಮಾಡಿದ್ದಾರೆ. ಶ್ರೀನಿವಾಸಪುರದ ರಾಘವೇಂದ್ರ (28) ಕೊಲೆಯಾದ ವ್ಯಕ್ತಿ. ಭಾನುವಾರ ಸಂಜೆ 6 ಗಂಟೆಯಲ್ಲಿ ಕೃತ್ಯ ನಡೆದಿದ್ದು, ಆರೋಪಿಗಳಾದ ಹೇಮಣ್ಣ ಮತ್ತು ವೇಲು ಎಂಬುವರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಟೈಲ್ಸ್ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಪಾಲಕರ ಜತೆ ನೆಲೆಸಿದ್ದ. ಮೃತ ವ್ಯಕ್ತಿಗೆ ಚಿಕ್ಕಪ್ಪಂದಿರಾದ ಮುನಿರಾಜು ಮತ್ತು ಮುನಿಸ್ವಾಮಿ ಎಂಬುವರು ಇದ್ದಾರೆ. ಎರಡು ವರ್ಷಗಳ ಹಿಂದೆ ಮುನಿಸ್ವಾಮಿ ಮನೆ ಮುಂದೆ ಮುನಿರಾಜು ವೇಗವಾಗಿ ಟ್ರ್ಯಾಕ್ಟರ್ ಓಡಿಸಿದ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಆಗ ಮುನಿಸ್ವಾಮಿ ಮತ್ತು ಆತನ ಪುತ್ರ ವಾಸು ಸೇರಿಕೊಂಡು ಮುನಿರಾಜುನನ್ನು ಹತ್ಯೆ ಮಾಡಿ ಬಿಡಿಸಲು ಬಂದ ಮುನಿರಾಜು ಅಳಿಯ ಹೇಮಣ್ಣನನ್ನ ಮೇಲೂ ಹಲ್ಲೆ ನಡೆಸಿದ್ದರು.

ಇದಾದ ಮೇಲೆ ಮುನಿಸ್ವಾಮಿ ಮತ್ತು ವಾಸು ಜೈಲು ಸೇರಿ ಬಿಡುಗಡೆಯಾಗಿದ್ದರು. ಆರೋಗ್ಯ ಚೇತರಿಕೆ ಕಂಡ ಮೇಲೆ ಹೇಮಣ್ಣ, ಮಾವನ ಕೊಲೆ ಹತ್ಯೆ ದ್ವೇಷಕ್ಕೆ ಮುನಿಸ್ವಾಮಿ ಮತ್ತು ವೇಲು ಹತ್ಯೆಗೆ ಯತ್ನಿಸಿದ್ದ. ಈ ಕೇಸಿನಲ್ಲಿ ಸಂಪಿಗೇಹಳ್ಳಿ ಪೊಲೀಸರು ಹೇಮಣ್ಣನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತ ಭಯಗೊಂಡ ಮುನಿಸ್ವಾಮಿ ಮತ್ತು ವೇಲು ಊರು ಖಾಲಿ ಮಾಡಿಕೊಂಡು ದಾವಣಗೆರೆಯಲ್ಲಿ ನೆಲೆಸಿದ್ದರು.

ಜೈಲಿನಿಂದ ಬಿಡುಗಡೆಯಾದ ಹೇಮಣ್ಣ, ಪ್ರತೀಕಾರ ತೀರಿಸಿಕೊಳ್ಳಲು ಮುನಿಸ್ವಾಮಿ ಮತ್ತು ವೇಲುನನ್ನು ಹುಡುಕಾಟ ನಡೆಸುತ್ತಿದ್ದರು. ಈ ಇಬ್ಬರು ತಲೆಮರೆಸಿಕೊಳ್ಳಲು ರಾಘವೇಂದ್ರ ಕುಟುಂಬ ಸಹಾಯ ಮಾಡಿದೆ ಎಂದು ಅವರ ಮೇಲೆ ಪದೇಪದೆ ಜಗಳ ಮಾಡುತ್ತಿದ್ದ. ಇದೇ ದ್ವೇಷಕ್ಕೆ ಭಾನುವಾರ ಸಂಜೆ 6 ಗಂಟೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ರಾಘವೇಂದ್ರನ ಮೇಲೆ ಹೇಮಣ್ಣ ಮತ್ತು ವೇಲು ದಾಳಿ ನಡೆಸಿ ಹತ್ಯೆ ಮಾಡಿ ರುಂಡ-ಮುಂಡ ಬೇರೆ ಮಾಡಿದ್ದರು. ಮೃತ ವ್ಯಕ್ತಿ ತಂದೆ ಕೊಟ್ಟ ದೂರಿನ ಮೇಲೆ ಪ್ರಕರಣದ ತನಿಖೆ ಕೈಗೊಂಡ ಯಲಹಂಕ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net