

ಬೆಂಗಳೂರು: ಪೊಲೀಸರ ಬಂಧಿಯಾಗಿರುವ ವಂಚಕರಲ್ಲೇ ಮಹಾ ವಂಚಕ ಯುವರಾಜ್ ಅಲಿಯಾಸ್ ಸ್ವಾಮಿಯ ಮತ್ತೊಂದು ಮುಖವಾಡ ಬಯಲಾಗಿದ್ದು, 2003ರಲ್ಲೇ ಪೊಲೀಸ್ ಪಟ್ಟಿಯಲ್ಲಿದ್ದ ಪ್ರಮುಖ ವಂಚಕ ಎಂಬುದು ತಿಳಿದುಬಂದಿದೆ.
ಸೆವಾಲಾಲ್ ಸಂಗಮಬಸವ ಸ್ವಾಮಿಯಾಗಿ ಎಸ್ಕೇಪ್ ಆದ ಬಳಿಕ ಯುವರಾಜ್ ಆಗಿ ಪ್ರತ್ಯಕ್ಷನಾದವನ ಕಥೆಯಿದು. ಆರಂಭದಲ್ಲಿ ಉಪ್ಪಾರಪೇಟೆ ಪೊಲೀಸರ ಕೈಯಿಂದ ಎಸ್ಕೇಪ್ ಆಗಿ ಇದೀಗ ಸಿಸಿಬಿ ಪೊಲೀಸರ ಕೈಯಲ್ಲಿ ಯುವರಾಜ್ ಸಿಕ್ಕಿಬಿದ್ದಿದ್ದಾನೆ.
2003ರಲ್ಲೇ ಯುವರಾಜ್ ಕೈಗೆ ಕೋಳ ಬಿದ್ದಿತ್ತು. ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ರೂಪಾಯಿ ವಂಚನೆ ಮಾಡಿದ ಆರೋಪದಲ್ಲಿ ಬಂಧಿಯಾಗಿದ್ದ. ಉತ್ತರ ಪ್ರದೇಶ, ಆಂಧ್ರ ಪ್ರದೇಶ ಹಾಗೂ ರಾಜಸ್ಥಾನ ಮೂಲದ ವಿದ್ಯಾರ್ಥಿಗಳಿಗೆ ಡೆಂಟಲ್ ಸೀಟ್ ಕೊಡಿಸುವುದಾಗಿ ಮಕ್ಮಲ್ ಟೋಪಿ ಹಾಕಿದ್ದ.
ಈ ಕುರಿತು 2003ರಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ 6 ತಿಂಗಳು ಸೆರೆವಾಸ ಸಹ ಅನುಭವಿಸಿದ್ದ. ಆ ಬಳಿಕ ಜಾಮೀನಿನ ಮೇಲೆ ಆಚೆ ಬಂದಿದ್ದ. ನಾಲ್ಕೈದು ವರ್ಷ ಪೊಲೀಸರ ಕಣ್ಣಿಗೆ ಮಣ್ಣೆರೆಚಿ ಜೀವನ ನಡೆಸುತ್ತಿದ್ದ.
ಇದರ ನಡುವೆ ಯುವರಾಜ್ ಹೆಸರಲ್ಲಿ ಪ್ರಭಾವಿಗಳಿಗೆ ವಂಚಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದ. ಇದೀಗ ಸಿಸಿಬಿ ಕೈಗೆ ಸಿಕ್ಕಿಬಿದ್ದಿರುವ ಯುವರಾಜ್ಗೆ ಮತ್ತೊಂದು ಕಂಟಕ ಶುರುವಾಗಿದೆ. ಸಿಸಿಬಿ ಪೊಲೀಸರ ಬಳಿಕ ಉಪ್ಪಾರಪೇಟೆ ಪೊಲೀಸರು ಯುವರಾಜ್ನನ್ನು ವಶಕ್ಕೆ ಪಡೆಯಲು ಸಿದ್ದರಾಗಿದ್ದಾರೆ. (ದಿಗ್ವಿಜಯ ನ್ಯೂಸ್)