

ಬಳ್ಳಾರಿ: ಸಬ್ ಇನ್ಸ್ಪೆಕ್ಟರ್ ನೇಮಕ ಸೇರಿದಂತೆ ರಾಜ್ಯದಲ್ಲಿ ಒಂದೊಂದೇ ಡೀಲ್ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದೀಗ ಮತ್ತೊಂದು ಡೀಲ್ ಕೇಸ್ ಬಹಿರಂಗಗೊಂಡಿದೆ. ಅಂದಹಾಗೆ ಇದು ಮೇಯರ್ ಸ್ಥಾನಕ್ಕಾಗಿ ನಡೆದಿದ್ದು, ಕೋಟಿಗಟ್ಟಲೆ ರೂಪಾಯಿ ಕೈ ಬದಲಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಪಟ್ಟಕ್ಕಾಗಿ ಇಲ್ಲಿನ 31ನೇ ವಾರ್ಡ್ ಸದಸ್ಯ ಎನ್.ಎಂ.ಡಿ. ಆಸೀಫ್ ಮೂರೂವರೆ ಕೋಟಿ ರೂಪಾಯಿ ಕೊಟ್ಟು ಕೈಸುಟ್ಟುಕೊಂಡಿದ್ದು, ಈ ಸಂಬಂಧ ಕಾಂಗ್ರೆಸ್ ಮುಖಂಡ ಎರ್ರಿಸ್ವಾಮಿ ವಿರುದ್ಧ ದೂರು ಕೂಡ ನೀಡಿದ್ದಾರೆ.
ಆಸೀಫ್ಗೆ ಮೇಯರ್ ಪಟ್ಟ ಕೊಡುವುದಾಗಿ ಭರವಸೆ ನೀಡಿದ್ದ ಎರ್ರಿಸ್ವಾಮಿ ಮೂರೂವರೆ ಕೋಟಿ ರೂ. ಪಡೆದು ಬಳಿಕ ವಂಚನೆ ಮಾಡಿದ್ದಾರೆ ಎಂದು ಆಸೀಫ್ ದೂರು ನೀಡಿದ್ದಾರೆ. ಎರ್ರಿಸ್ವಾಮಿ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರ ಸಂಬಂಧಿ.
ವರಸೆಯಲ್ಲಿ ಎರ್ರಿಸ್ವಾಮಿ ಶಾಸಕರ ಮಾವ ಆಗಿದ್ದು, ಅವರ ಎಲ್ಲ ಕೆಲಸಗಳನ್ನೂ ನೊಡಿಕೊಳ್ಳುತ್ತಿದ್ದರು. ಆದರೆ ಮೇಯರ್ ಸ್ಥಾನ ಕೊಡಿಸುವ ಭರವಸೆ ನೀಡಿ ಕೋಟ್ಯಂತರ ರೂ. ವಂಚಿಸಿದ ಪ್ರಕರಣ ಸಂಬಂಧ ಬಳ್ಳಾರಿಯ ಕೌಲ್ ಬಜಾರ್ ಠಾಣೆಯಲ್ಲಿ ಎರ್ರಿಸ್ವಾಮಿ ವಿರುದ್ಧ ಆಸೀಫ್ ದೂರು ನೀಡಿದ್ದಾರೆ. ಎರ್ರಿಸ್ವಾಮಿ ಮೇಯರ್ ಸ್ಥಾನವನ್ನೂ ಕೊಟ್ಟಿಲ್ಲ, ನೀಡಿದ್ದ ಹಣವನ್ನೂ ವಾಪಸ್ ಮಾಡಿಲ್ಲ, ಹೀಗಾಗಿ ಆಸೀಫ್ ದೂರು ನೀಡಿದ್ದಾರೆ.