

ಬೆಂಗಳೂರು:ರಾಜ್ಯದಲ್ಲಿ ನಾಲ್ಕೈದು ವರ್ಷ ಕಳೆದರೂ ಅರ್ಜಿದಾರರಿಗೆ ಹೊಸ ರೇಷನ್ ಕಾರ್ಡ್ ಸಿಕ್ಕಿಲ್ಲ. ಪಡಿತರ ಚೀಟಿ ಕೋರಿ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಹೊಸ ರೇಷನ್ ಕಾರ್ಡ್, ಸೇರ್ಪಡೆ, ತಿದ್ದುಪಡಿ ಕೋರಿ ಇದುವರೆಗೆ ಇಲಾಖೆಗೆ ಸಲ್ಲಿಕೆಯಾದ ಒಟ್ಟು39,04,798 ಅರ್ಜಿಗಳ ಪೈಕಿ 26,48,171 ಅರ್ಜಿಗಳು ಅನುಮೋದನೆವಾದರೆ, 9,60,641 ಅರ್ಜಿಗಳು ತಿರಸ್ಕಾರಗೊಂಡಿತ್ತು. 36,08,812 ಅರ್ಜಿಗಳು ವಿಲೇವಾರಿಯಾದರೆ 2,95,986 ಬಾಕಿ ಉಳಿದಿತ್ತು. 2023ರ ಅಂತ್ಯಕ್ಕೆ ಬಾಕಿ ಅರ್ಜಿಗಳು ವಿಲೇವಾರಿಗೆ ಸರ್ಕಾರ ಆದೇಶಿಸಿತ್ತು. ಇದರಲ್ಲಿ ಅರ್ಹರಿರುವ 2,34,631 ಅರ್ಜಿಗಳ ಪೈಕಿ 1,69,630 ಅರ್ಜಿಗಳನ್ನು ಅನುಮೋದಿಸಿದರೆ, 59,528 ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು.
ಅಲ್ಲದೆ, 2023ರ ಆಗಸ್ಟ್ ಬಳಿಕ ಹೊಸ ಬಿಪಿಎಲ್ ಕೋರಿ 2,10,743 ಅರ್ಜಿಗಳು ಸಲ್ಲಿಕೆಯಾಗಿವೆ. ಬಾಕಿ ಉಳಿದಿರುವ ಅರ್ಜಿಗಳನ್ನು ನಿಗದಿಪಡಿಸಿದ ಮಾನದಂಡ ಆಧಾರದಲ್ಲಿ ಪರಿಶೀಲಿಸಬೇಕು. ಯಾವುದೇ ಅರ್ಜಿಯೂ ಅನರ್ಹವಾಗಿದ್ದಲ್ಲಿ ಅದನ್ನು ಎಪಿಎಲ್ ಕಾರ್ಡ್‌ಗೆ ಶಿಫಾರಸ್ಸು ಮಾಡಬೇಕು. ಪ್ರತಿ ಅರ್ಜಿ ಪರಿಶೀಲಿಸುವ ವೇಳೆ ಅರ್ಜಿದಾರರು ಜಂಟಿ ಕುಟುಂಬವೇ, ಜಂಟಿ ಕುಟುಂಬದಿಂದ ಪ್ರತ್ಯೇಕವಾಗಲು ಅರ್ಜಿ ಸಲ್ಲಿಸುವವರೇ, ಎಪಿಎಲ್ ಚೀಟಿ ಹೊಂದಿರುವವರೇ ಅಥವಾ ಈಗಾಗಲೇ ಯಾವುದಾದರೂ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಅರ್ಜಿಗಳ ಅರ್ಹತೆ ಮತ್ತು ಅನರ್ಹತೆ ಬಗ್ಗೆ ಪರಿಶೀಲಿಸಬೇಕೆ ಹೊರತು ಹೊಸ ಕಾರ್ಡ್‌ನ್ನು ಮಂಜೂರು ಮಾಡಬಾರದು ಎಂದು ಆದೇಶಿಸಿತ್ತು. ಅದರಂತೆ, ಬಾಕಿ ಉಳಿದಿರುವ ಅರ್ಜಿಗಳನ್ನು ಮೇಲಿನ ನಿಯಮಗಳಂತೆ ಇಲಾಖೆ ಪರಿಶೀಲಿಸಿ ಮಂಜೂರಾತಿಗೆ ಸಿದ್ಧತೆ ಮಾಡಿಕೊಂಡಿದೆ. ಒಂದು ವೇಳೆ ಸರ್ಕಾರವು ಅನುಮತಿ ಕೊಟ್ಟರೆ ಬಾಕಿ ಅರ್ಜಿಗಳ ವಿಲೇವಾರಿ ಆಗಲಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1,03,70,669 ಬಿಪಿಎಲ್ ಕಾರ್ಡ್ ನೀಡಬೇಕೆಂಬ ನಿಯಮವಿದೆ. ಆದರೆ, ರಾಜ್ಯದಲ್ಲಿ ಸದ್ಯ 3,93,29,981 ಲಾನುಭವಿಗಳಿಗೆ 1,16,51,209 ಬಿಪಿಎಲ್ ಕಾರ್ಡ್ ನೀಡಲಾಗಿದೆ. ನಿಗದಿಗಿಂತ 14 ಲಕ್ಷ ಬಿಪಿಎಲ್ ಕಾರ್ಡ್‌ಗಳಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ.ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖೊಟ್ಟಿ ದಾಖಲೆ ಕೊಟ್ಟು ಆರ್ಥಿಕ ಸಬಲರು, ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿದ ಆಧಾರದ ಮೇಲೆ ಹೊಸ ರೇಷನ್ ಕಾರ್ಡ್ ಮಂಜೂರು ಮಾಡಲಾಗುತ್ತದೆ. ‘ಅನರ್ಹರ ಪತ್ತೆ ಮೊದಲು; ಪಡಿತರ ಚೀಟಿ ವಿತರಣೆ ಆನಂತರ’ ಎಂಬ ಸೂತ್ರ ಮೇಲೆ ಕಾರ್ಡ್ ಮಂಜೂರು ಮಾಡಲಾಗಿದೆ.
ಗಂಭೀರ ಕಾಯಿಲೆ ಇರುವವರಿಗೆ ಮಾತ್ರ ಕಾರ್ಡ್: ಹೃದಯ ಸಮಸ್ಯೆ, ಕ್ಯಾನ್ಸರ್ ಸೇರಿ ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ತುರ್ತು ವೈದ್ಯಕೀಯ ಆಧಾರದ ಮೇರೆಗೆ ಅರ್ಹ ಪಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ನೀಡಲಾಗುತ್ತಿದೆ. ಅಲ್ಲದೆ, ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ, ಬುಡಕಟ್ಟು ಜನಾಂಗದವರಿಗೆ ಮಂಜೂರು ಮಾಡಲಾಗುತ್ತಿದೆ. ಪಡಿತರ ಚೀಟಿ ತಿದ್ದುಪಡಿಗೆ ಪ್ರತಿ ತಿಂಗಳು 1ನೇ ತಾರೀಕಿನಿಂದ 10ನೇ ತಾರೀಕಿನವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಇದೀಗ ಪೂರ್ತಿ ತಿಂಗಳು ಅವಕಾಶ ಕಲ್ಪಿಸಲಾಗಿದೆ.
ಮೃತಪಟ್ಟ ಹೆಸರು ಡಿಲೀಟ್: ಸರ್ಕಾರದ ಮಾನದಂಡ ವಿರುದ್ಧವಾಗಿ ಪಡಿತರ ಚೀಟಿ ಪಡೆದವರನ್ನು ಕುಟುಂಬ ತಂತ್ರಾಂಶದಿಂದ ಪತ್ತೆ ಹಚ್ಚಲಾಗುತ್ತಿದೆ. ಆದಾಯ ತೆರಿಗೆ ಪಾವತಿದಾರರು, ವಾರ್ಷಿಕ ಆದಾಯ 1.20 ಲಕ್ಷಗಿಂತ ಅಧಿಕವಾಗಿರುವ ಪಲಾನುಭವಿಗಳು, ಸರ್ಕಾರಿ ನೌಕರರು, ಮೃತ ಪಲಾನುಭವಿಗಳು, 6 ತಿಂಗಳಿಂದ ಪಡಿತರ ಪಡೆಯದೆ ಇರುವ ಬಿಪಿಎಲ್ ಮಾಹಿತಿ ಪಡೆದು ರದ್ದುಪಡಿಸಲಾಗುತ್ತಿದೆ. 2023-24ರಲ್ಲಿ 16,719, 2024-25ರಲ್ಲಿ 74,342 ಬಿಪಿಎಲ್ ಚೀಟಿಗಳನ್ನು ರದ್ದುಪಡಿಸಲಾಗಿದೆ. ಮೃತಪಟ್ಟ ಹೆಸರುಗಳನ್ನು ಕಾರ್ಡ್‌ನಲ್ಲಿ ಡಿಲೀಟ್ ಮಾಡಲಾಗಿದೆ. ಹಲವು ಪಲಾನುಭವಿಗಳ ಚೀಟಿಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತಿಸಲಾಗಿದೆ.
ರೇಷನ್ ಕಾರ್ಡ್‌ಗಳ ವಿವರ
ವಿಧ ಸಂಖ್ಯೆ ಫಲಾನುಭವಿಗಳ ಸಂಖ್ಯೆ
ಬಿಪಿಎಲ್ 1,16,51,209 3,93,29,981
ಅಂತ್ಯೋದಯ 10,83,977 43,81,789
ಎಪಿಎಲ್ 24,18,458 83,21,698
ಒಟ್ಟು 1,51,53,644 5,20,33,468