

ಬೆಂಗಳೂರು: ದಿವಂಗತ ಆರ್. ಧ್ರುವನಾರಾಯಣ್ ನಿಧನದಿಂದ ತೆರವಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದರಾದ ಬಿ.ಎನ್. ಚಂದ್ರಪ್ಪ ಅವರನ್ನು ಎಐಸಿಸಿ ನೇಮಿಸಿದೆ.
ಕಾಂಗ್ರೆಸ್ನಿಂದ ಬಿ.ಎನ್. ಚಂದ್ರಪ್ಪ ಅವರಿಗೆ ನೂತನ ಜವಬ್ದಾರಿಯನ್ನು ನೀಡಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ದಲಿತ (ಎಡಗೈ) ನಾಯಕ ಬಿ.ಎನ್ ಚಂದ್ರಪ್ಪ ಅವರನ್ನು ನೇಮಕ ಮಾಡಲಾಗಿದೆ.
ಎಸ್ಸಿ ಲೆಫ್ಟ್ಗೆ ಕೆಪಿಸಿಸಿ ವರ್ಕಿಂಗ್ ಪ್ರೆಸಿಡೆಂಟ್ ಸ್ಥಾನ ನೀಡಬೇಕು ಎಂದು ಈ ಹಿಂದೆ ಎಡಗೈ ನಾಯಕರು ಒತ್ತಾಯ ಮಾಡಿದ್ದರು. ಇದೀಗ ಎಡಗೈ ನಾಯಕರ ಬೇಡಿಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಈಡೇರಿಸಿದೆ. ಈ ಮೂಲಕ ದಲಿತ ಎಡಗೈ ಸಮುದಾಯವನ್ನು ಚುನಾವಣಾ ಸಂದರ್ಭದಲ್ಲಿ ಮನವೊಲಿಸಿದಂತಿದೆ.
<p>" class="alignnone size-full wp-image-1493340" height="1600" src="https://www.vijayavani.net/wp-content/uploads/2023/04/WhatsApp-Image-2023-04-09-at-9.27.18-AM.webp" width="1200"/>
ಕಾಂಗ್ರೆಸ್ ಕಟ್ಟಾಳು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್. ಧ್ರುವನಾರಾಯಣ (61) ಅವರು ತೀವ್ರ ಹೃದಯಾಘಾತದಿಂದ ಮೈಸೂರಿನ ಡಿಆರ್ಎಂ ಆಸ್ಪತ್ರೆಯಲ್ಲಿ ಮಾ.11ರಂದು ವಿಧಿವಶರಾದರು. ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿದ್ದರು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಒಂದು ಮತದ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಧ್ರುವನಾರಾಯಣ ನಿಧನ ಬೆನ್ನಲ್ಲೇ ಅವರ ಪತ್ನಿ ವೀಣಾ ಧ್ರುವನಾರಾಯಣ ಕೂಡ ಏಪ್ರಿಲ್ 7ರಂದು ವಿಧಿವಶರಾಗಿದ್ದಾರೆ.
ತಂದೆ ಧ್ರುವನಾರಾಯಣ ಮೃತಪಟ್ಟ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ತಂದೆಯ ಸಾವಿನ ನೋವಲ್ಲೂ ಚುನಾವಣಾ ಚಟುವಟಿಕೆಯಲ್ಲಿ ಬಿಜಿಯಾಗಿದ್ದ ದರ್ಶನ್ಗೆ ಇದೀಗ ತಾಯಿಯೂ ಮೃತಪಟ್ಟ ಸುದ್ದಿ ತೀವ್ರ ಆಘಾತ ನೀಡಿದೆ.