ಮಾಜಿ ಡಾನ್ ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆಸಿ ದುಷ್ಕರ್ಮಿಗಳು ಎಸ್ಕೇಪ್! Muthappa Rai

Muthappa Rai
Published on

Muthappa Rai : ಮಾಜಿ ಡಾನ್ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ರಾಮನಗರದ ಬಿಡದಿ ಗೇಟ್ ಬಳಿ ಶುಕ್ರವಾರ (ಏಪ್ರಿಲ್​ 18) ತಡರಾತ್ರಿ ನಡೆದಿದೆ.

.

ರಿಕ್ಕಿ ರೈ ಅವರು ಫಾರ್ಚೂನರ್ ಕಾರಿನಲ್ಲಿ ಗನ್​ ಮ್ಯಾನ್​ ಜತೆಯಲ್ಲಿ ಬಿಡದಿ ಮನೆಯಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಕಾದು ಕುಳಿತಿದ್ದ ದುಷ್ಕರ್ಮಿಗಳು ಮಧ್ಯರಾತ್ರಿ 12.30ರ ಸುಮಾರಿಗೆ ಬಿಡದಿ ಗೇಟ್​ ಬಳಿ ಗುಂಡಿನ ದಾಳಿ ನಡೆದಿದ್ದಾರೆ. ಪರಿಣಾಮವಾಗಿ ರಿಕ್ಕಿ ರೈ ಮೂಗು ಹಾಗೂ ಕೈಗಳಿಗೆ ಗಂಭೀರವಾದ ಗಾಯಗಳಾಗಿವೆ.

ದಾಳಿಯ ವೇಳೆ ಕಾರಿನ ಹಿಂಬದಿ ಸೀಟಿನಲ್ಲಿ ರಿಕ್ಕಿ ರೈ ಕುಳಿತ್ತಿದ್ದರು. ಒಂದು ಸುತ್ತು ಫೈರಿಂಗ್ ನಡೆಸಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ರಿಕ್ಕಿ ರೈ ಅವರನ್ನು ತಕ್ಷಣ ಬಿಡದಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ಮತ್ತು ಡಿವೈಎಸ್‌ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಅರಂಭಿಸಿದ್ದಾರೆ. ದಾಳಿಯ ಹಿಂದಿರುವ ಕಾರಣವೇನು ಎಂದು ತಿಳಿಯಲು ಮತ್ತು ದುಷ್ಕರ್ಮಿಗಳ ಗುರುತು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ.

ದುಷ್ಕರ್ಮಿಗಳು ಡ್ರೈವಿಂಗ್ ಸೀಟ್‌ನನ್ನೇ ಗುರಿಯಾಗಿಸಿ ಮೂರು ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ. ಯಾವಾಗಲೂ ರಿಕ್ಕಿ ರೈ ಅವರೇ ಕಾರು ಓಡಿಸುತ್ತಿದ್ದರು. ಹೀಗಾಗಿ ಡ್ರೈವಿಂಗ್​ ಸೀಟ್​ ಅನ್ನೇ ಟಾರ್ಗೆಟ್​ ಮಾಡಿದ್ದರು. ಆದರೆ, ಅದೃಷ್ಟವಶಾತ್​, ರಿಕ್ಕಿ ರೈ ಅವರು ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಗುಂಡಿನ ದಾಳಿಯ ವೇಳೆ ತಕ್ಷಣ ಮುಂದೆ ಬಗ್ಗಿದ್ದರಿಂದ ಕಾರು ಚಾಲಕನು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಪಕ್ಕದ ಸೀಟ್‌ನಲ್ಲಿದ್ದ ರಿಕ್ಕಿ ರೈ ಅವರ ಮೂಗು ಮತ್ತು ಕೈಗೆ ಗುಂಡು ತಾಕಿದ್ದು, ಗಂಭೀರ ಗಾಯಗೊಂಡಿದ್ದಾರೆ.

ಅಂದಹಾಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಕ್ರಿಯವಾಗಿರುವ ರಿಕ್ಕಿ ರೈ ಎರಡು ದಿನಗಳ ಹಿಂದಷ್ಟೇ ರಷ್ಯಾದಿಂದ ವಾಪಸಾಗಿದ್ದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net