

ಚಿತ್ರ: ಯುದ್ಧಕಾಂಡ
ನಿರ್ದೇಶನ: ಪವನ್ ಭಟ್
ತಾರಾಗಣ: ಕೃಷ್ಣ ಅಜೇಯ್ ರಾವ್, ಅರ್ಚನಾ ಜೋಯಿಸ್, ಪ್ರಕಾಶ್ ಬೆಳವಾಡಿ, ಟಿ.ಎಸ್. ನಾಗಾಭರಣ, ರಾಧನ್ಯ ರಾಕೇಶ್ ಮತ್ತಿತರರು.
| ಹರ್ಷವರ್ಧನ್ ಬ್ಯಾಡನೂರು
"ಗೌರವಾನ್ವಿತ ರಾಷ್ಟ್ರಪತಿಗಳೇ, ಈ ಪತ್ರದ ಮೂಲಕ ನನ್ನ ಅಭಿಪ್ರಾಯ ಮತ್ತು ಕೋರಿಕೆಯನ್ನು ನಿಮ್ಮ ಮುಂದಿಡಲು ಇಚ್ಛಿಸುತ್ತಿದ್ದೇನೆ. ಜಸ್ಟೀಸ್ ಡಿಲೇಯ್ಡ್ ಈಸ್ ಜಸ್ಟೀಸ್ ಡಿನೈಡ್ ಎಂಬಂತೆ ನ್ಯಾಯ ಸಿಗುವುದು ತಡವಾದಷ್ಟು, ನ್ಯಾಯ ವ್ಯವಸ್ಥೆಯ ಮೇಲಿರುವ ವಿಶ್ವಾಸವೇ ಕಳೆದುಹೋಗಿ, ಅದು ಇನ್ನಷ್ಟು ಅನ್ಯಾಯಗಳಿಗೆ ದಾರಿ ಮಾಡಿಕೊಡುತ್ತದೆ. ವಿಶೇಷವಾಗಿ ಸ್ತ್ರೀ ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಸರಿಯಾದ ಸಮಯಕ್ಕೆ ನ್ಯಾಯ ಸಿಗಬೇಕಾಗಿದೆ...' ಹೀಗೆ ಸಾಗುತ್ತದೆ "ಯುದ್ಧಕಾಂಡ' ಚಿತ್ರದ ಕೊನೆಯಲ್ಲಿ ಅಜೇಯ್ ರಾವ್, ರಾಷ್ಟ್ರಪತಿಗಳಿಗೆ ಬರೆದಿರುವ ಓಪನ್ ಲೆಟರ್. ನಟ, ನಿರ್ಮಾಪಕನಾಗಿ ಮಾತ್ರವಲ್ಲದೇ ಅವರಿಲ್ಲಿ ಒಬ್ಬ ಮಗ, ತಮ್ಮ, ಪತಿ, ತಂದೆ, ಅಣ್ಣನಾಗಿ ಹೆಣ್ಣುಮಕ್ಕಳ ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ನಿವೇದಿತಾ (ಅರ್ಚನಾ), ಎಂಎಲ್ಎ ಜಗನ್ನಾಥನ ಸಹೋದರ ಜಾಕಿಯನ್ನು ಕೋರ್ಟ್ ಆವರಣದಲ್ಲೇ ಶೂಟ್ ಮಾಡಿ ಕೊಲ್ಲುವ ಮೂಲಕ "ಯುದ್ಧಕಾಂಡ' ಶುರುವಾಗುತ್ತದೆ. ಈಗಾಗಲೇ ಟೀಸರ್, ಟ್ರೇಲರ್ನಲ್ಲಿ ನೋಡಿರುವಂತೆ ಆರು ವರ್ಷದ ಪುಟಾಣಿ ಬಾಲಕಿಯ ಮೇಲೆ ಜಾಕಿ ಅತ್ಯಾಚಾರ ಎಸಗಿರುತ್ತಾನೆ. ಎರಡು ವರ್ಷ ಕಳೆದರೂ ಅತ್ತ ನಿವೇದಿತಾ ಮಗಳು ಕೋಮಾದಿಂದ ಚೇತರಿಸಿಕೊಂಡಿರುವುದಿಲ್ಲ, ಇತ್ತ ಜಾಕಿಯ ಬಂಧನವೂ ಆಗಿರುವುದಿಲ್ಲ. ಅತ್ಯಾಚಾರಕ್ಕೊಳಗಾದ ಪುಟ್ಟ ಮಗುವಿನ ತಾಯಿಯೇ ಅತ್ಯಾಚಾರಿಯ ಕೊಲೆ ಮಾಡಿರುವ ಪ್ರಕರಣವನ್ನು ಲಾಯರ್ ಭರತ್ (ಅಜೇಯ್ ರಾವ್) ಕೈಗೆತ್ತಿಕೊಳ್ಳುತ್ತಾನೆ. ಆಗಷ್ಟೇ ಲಾ ಓದಿ ಬಂದಿರುವ ಭರತ್, ಹಲವು ವಕೀಲರ ಬಳಿ ಅಲೆದು, ಕೊನೆಗೆ ನಾಗಭೂಷಣ (ನಾಗೇಂದ್ರ ಶಾ) ಬಳಿ ಕೆಲಸಕ್ಕೆ ಸೇರುತ್ತಾನೆ. ಅಪಘಾತ, ಚೆಕ್ ಬೌನ್ಸ್, ೋರ್ಜರಿಯಂತಹ ಕೇಸ್ಗಳಲ್ಲಷ್ಟೇ ಅನುಭವವಿರುತ್ತದೆ. ಇತ್ತ ಎಂಎಲ್ಎ ಪರ ಹೆಸರಾಂತ ಲಾಯರ್ ರಾರ್ಬಟ್ ಡಿಸೋಜಾ (ಪ್ರಕಾಶ್ ಬೆಳವಾಡಿ) ವಾದಕ್ಕಿಳಿದಿರುತ್ತಾನೆ. ಮುಂದೆ ಕೋರ್ಟ್ನಲ್ಲಿ ನಡೆಯುವ ವಾದ, ವಿವಾದ, ವಾಗ್ವಾದಗಳ ಸುತ್ತ "ಯುದ್ಧಕಾಂಡ' ಸಾಗುತ್ತದೆ.
ಮೊದಲು ಹಣಕ್ಕಾಗಿ, ನಂತರ ನ್ಯಾಯಕ್ಕಾಗಿ ಶ್ರಮಿಸುವ ಬುದ್ಧಿವಂತ ಭರತ್ ಪಾತ್ರದಲ್ಲಿ ಅಜೇಯ್ ಇಷ್ಟವಾಗುತ್ತಾರೆ. "ಕೆಜಿಎಫ್' ಅಮ್ಮ ಅರ್ಚನಾ ಜೋಯಿಸ್ ಮತ್ತೊಮ್ಮೆ ಅಮ್ಮನಾಗಿ ಮಿಂಚಿದ್ದಾರೆ. ಎಂದಿನಂತೆ ವಿಭಿನ್ನ ಮ್ಯಾನರಿಸಂ ಮೂಲಕ ಗಮನ ಸೆಳೆಯುತ್ತಾರೆ ಪ್ರಕಾಶ್ ಬೆಳವಾಡಿ. ಉಳಿದ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಗಂಭೀರವಾಗಿ ಸಾಗುವ ಕಥೆಯಲ್ಲಿ ಲವ್ಸ್ಟೋರಿ ಮತ್ತು ಕ್ಲೆಮ್ಯಾಕ್ಸ್ನಲ್ಲಿ ಕೋರ್ಟ್ರೂಮ್ ಗೋಳಾಟ ಅಗತ್ಯವಿತ್ತಾ? ಪ್ರಶ್ನೆ ಮೂಡುವುದು ಸಹಕ. ಇನ್ನು ದೆಹಲಿ ನಿರ್ಭಯಾ ಕೇಸ್, ಉನ್ನಾವೋ ಪ್ರಕರಣ, ಮುರಾದಾಬಾದ್ ರೇಪ್ ಕೇಸ್... ಹೀಗೆ ಐಪಿಸಿ ಸೆಕ್ಷನ್ಗಳು, ಕೇಸ್ ಸ್ಟಡಿಗಳ ಮೇಲೆ ಬೆಳಕು ಚೆಲ್ಲಿರುವುದು ಗಮನಾರ್ಹ. ಒಟ್ಟಾರೆ "ಯುದ್ಧಕಾಂಡ' ಸಿನಿಮಾ ಮಾತ್ರವಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ, ಜನರಲ್ಲಿ ಅರಿವು ಮೂಡಿಸುವ ಒಂದು ಉತ್ತಮ ಪ್ರಯತ್ನ.