ಬೋರ್‌ವೆಲ್‌ಗಳಿಗೆ ಪ್ರೊಮೀಟರ್ ಅಳವಡಿಕೆ

FotoJet (2)
Published on

ನಗರಸಭೆ ಪೌರಾಯುಕ್ತ ಚಲಪತಿ ಮಾಹಿತಿ

ಚಿಂತಾಮಣಿ: ನಗರಕ್ಕೆ ನೀರು ಪೂರೈಸುವ ನಗರಸಭೆಯ ಎಲ್ಲ ಬೋರ್‌ವೆಲ್‌ಗಳಿಗೆ ಹೈಟೆಕ್ ಸ್ಪರ್ಶ ನೀಡಲು ಸಚಿವ ಡಾ.ಎಂ.ಸಿ.ಸುಧಾಕರ್ ಸೂಚಿಸಿದ್ದು, ಅದರಂತೆ ಎಲ್ಲ ಬೋರ್‌ವೆಲ್‌ಗಳಿಗೆ ಪ್ರೊಮೀಟರ್ ಅಳವಡಿಸುತ್ತಿರುವುದಾಗಿ ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಹೇಳಿದರು.

ನಗರದ ವಿವಿಧೆಡೆ ನೀರು ಸರಬರಾಜು ಕೇಂದ್ರಗಳಲ್ಲಿ ಪ್ರೊಮೀಟರ್ ಅಳವಡಿಸುವುದಕ್ಕೆ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ಮ್ಯಾನ್‌ಪವರ್ ಕಡಿಮೆ ಮಾಡುವ ನಿಟ್ಟಿನಲ್ಲಿ ಪೈಲೆಟ್ ಪ್ರೋಗ್ರಾಂ ಆಗಿ ಟೈಡ್ ಮತ್ತು ನಿರ್ಮಲ್ ಮಿಷನ್ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು. ಓವರ್‌ಹೆಡ್ ಟ್ಯಾಂಕ್ ಮತ್ತು ಸಂಪ್‌ಗೆ ಪ್ರೊಮೀಟರ್ ಅಳವಡಿಸಲಾಗುವುದು. ಇದರಿಂದ ಸಂಪ್, ಟ್ಯಾಂಕ್‌ನಲ್ಲಿರುವ ನೀರಿನ ಪ್ರಮಾಣ, ಕೊಳವೆಬಾವಿಗಳಿಂದ ಸಂಗ್ರಹವಾಗುತ್ತಿರುವ ನೀರಿನ ಪ್ರಮಾಣ ಹಾಗೂ ಜನರಿಗೆ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣದ ಬಗ್ಗೆ ತಿಳಿಯಬಹುದಾಗಿದೆ. ಚೇಳೂರು ರಸ್ತೆಯ ನೀರು ಸರಬರಾಜು ಕೇಂದ್ರದ ವ್ಯಾಪ್ತಿಯಲ್ಲಿ ಒಂಬತ್ತು ಕೊಳವೆಬಾವಿಗಳಿದ್ದು ಎಲ್ಲ ಬೋರ್‌ವೆಲ್‌ಗಳಿಗೂ ಪ್ರೊಮೀಟರ್ ಮತ್ತು ಸೆನ್ಸರ್ ಮೀಟರ್ ಅಳವಡಿಸಲಾಗುವುದು ಎಂದರು. ಈಗಾಗಲೇ ಹತ್ತಕ್ಕೂ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿದ್ದು, ಉಳಿದ ಎಲ್ಲ ಓವರ್‌ಹೆಡ್ ಹಾಗೂ ನೆಲಮಟ್ಟದ ಟ್ಯಾಂಕ್‌ಗಳ ಸ್ವಚ್ಛತೆಗೆ ಟೆಂಡರ್ ಕರೆಯಲಾಗಿದೆ. ಸಾರ್ವಜನಿಕರು ನೀರು ಪೋಲು ಮಾಡಬಾರದು ಹಾಗೂ ಸಕಾಲದಲ್ಲಿ ನೀರಿನ ತೆರಿಗೆ ಪಾವತಿಸುವಂತೆ ಪೌರಾಯುಕ್ತರು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ ಅರ್.ಜಗನ್ನಾಥ್, ಉಪಾಧ್ಯಕ್ಷೆ ರಾಣಿಯಮ್ಮ, ನೀರು ಸರಬರಾಜು ಉಸ್ತುವಾರಿ ಅಧಿಕಾರಿ ಸಿ.ಕೆ. ಬಾಬು, ನಿರ್ಮಲ್ ಮಿಷನ್ ಸಂಸ್ಥೆ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net