ಬಂಟ್ವಾಳದಲ್ಲಿ ಇವೆ ಗುರುತುಗಳು

nere
1974ರಲ್ಲಿ ಬಂಟ್ವಾಳವನ್ನು ಬಾಧಿಸಿದ ನೆರೆ
Published on

ಬಂಟ್ವಾಳ: ಬಂಟ್ವಾಳ, ಪಾಣೆಮಂಗಳೂರು ಭಾಗದ ಕಟ್ಟಡಗಳಲ್ಲಿ ಮುಳುಗಿರುವ ಜಾಗಕ್ಕೆ ಹಾಕಿರುವ ಗುರುತುಗಳನ್ನು ಈಗಲೂ ಕಾಣಬಹುದು. ಅದೇ ಜಾಗದಲ್ಲಿ 1974ರ ಪ್ರವಾಹದ ಗುರುತುಗಳಿವೆ. ಅಂದು ನದಿ ನೀರು ಪೇಟೆಯತ್ತ ನುಗ್ಗಿದ್ದಾಗ ಬಂಟ್ವಾಳ ಪೇಟೆ ಜನರಿಗೆ ಆಶ್ರಯ ನೀಡಿದ್ದು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ.

ಚಿತ್ರಗಳು ಈಗ ವೈರಲ್

ಕೆಲ ದಿನಗಳ ಹಿಂದೆ 1974ರಲ್ಲಿ ಕ್ಲಿಕ್ ಮಾಡಿದ್ದ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಬಂಟ್ವಾಳದ ವೈದ್ಯರಾಗಿದ್ದ ಡಾ.ನರೇಂದ್ರ ಆಚಾರ್ಯ ಅವರು ನೆರೆ ಬಂದಿದ್ದ ವೇಳೆ ತೆಗೆದ ಕಪ್ಪು ಬಿಳುಪಿನ ಫೊಟೋಗಳು ಈಗ 1974ರ ನೆರೆ ಹೇಗಿತ್ತು ಎಂಬುದಕ್ಕೆ ಸಾಕ್ಷಿಯಾಗಿವೆ. ಅದೀಗ ಅವರ ಪುತ್ರ ಡಾ.ನಿರಂಜನ ಆಚಾರ್ಯರ ಸಂಗ್ರಹದಲ್ಲಿವೆ.

ಮಾನವೀಯತೆ ಮೆರೆದ ಜನ

ನಾನು ಬಂಟ್ವಾಳದ ದೇವಸ್ಥಾನದ ಪಕ್ಕ ಇದ್ದೆ, ನನ್ನ ಪತ್ನಿ ಈಗಿನ ಬೈಪಾಸ್ ಬಳಿ ಮನೆಯಲ್ಲಿದ್ದರು. ದೂರವಾಣಿ ಕರೆ ಮಾಡಿ ಪತ್ನಿಗೆ ಪಕ್ಕದ ಸಂಬಂಧಿಕರ ಮನೆಗೆ ತೆರಳಲು ತಿಳಿಸಿದ್ದೆ. ಆ ಸಂದರ್ಭ ಇಡೀ ಪೇಟೆಯವರಿಗೆ ಆಶ್ರಯತಾಣವಾಗಿದ್ದು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ. ದನಕರುಗಳು, ಸಾಮಾನು ಸರಂಜಾಮುಗಳೊಂದಿಗೆ ಹಲವರು ಮಹಾಲಿಂಗೇಶ್ವರ ದೇವಳದಲ್ಲಿ ಆಶ್ರಯ ಪಡೆದರು. ಕೆಲವರು ಪ್ರವಾಸಿ ಮಂದಿರ ಹಾಗೂ ಬೋರ್ಡ್ ಶಾಲೆಗಳನ್ನು ಆಶ್ರಯ ತಾಣವಾಗಿಸಿದರು. ಮಂಜೇಶ್ವರ ಗಣೇಶ ಮಲ್ಯರು, ತಮ್ಮ ಗೋದಾಮಿನಲ್ಲಿದ್ದ ಅವಲಕ್ಕಿ ಮೂಟೆಗಳು ನೆರೆ ನೀರಿನಲ್ಲಿ ಕೊಚ್ಚಿ ಹೋಗದಂತೆ ಎಚ್ಚರ ವಹಿಸಿ ಅವೆಲ್ಲವನ್ನೂ ಹಂಚಿ ಸಂತ್ರಸ್ತರ ಹಸಿವನ್ನು ಇಂಗಿಸಿದರು. ಯುವಕರ ತಂಡವೊಂದು ವೃದ್ಧರು, ಅಶಕ್ತರು, ಮಕ್ಕಳು, ಗರ್ಭಿಣಿಯರಿಗೆ ರಕ್ಷಣೆ ಒದಗಿಸಿತ್ತು ಎಂದು 85 ವರ್ಷದ ಉದ್ಯಮಿ ಲಕ್ಷ್ಮಣ ಅಚ್ಯುತ ಬಾಳಿಗ ನೆನಪಿಸಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net