

ಕಾಸರಗೋಡು: ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಯುವಕರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಜೇಶ್ವರ ಹೊಸಬೆಟ್ಟು ಸಸಿಹಿತ್ಲು ನಿವಾಸಿ ಗೌತಮ್ ರಾಜ್ (23) ಹಾಗೂ ಕುಂಜತ್ತೂರು ಮರಿಯಾಶ್ರಮ ಚರ್ಚ್ ಕಾಂಪೌಡ್‌ನ ಬ್ರಯಾನ್ ಎಲ್ಬನ್ ಪಿಂಟೊ (20) ಆತ್ಮಹತ್ಯೆಮಾಡಿಕೊಂಡವರು.
ಉಡುಪಿಯಲ್ಲಿ ವಿಡಿಯೋ ಅನಿಮೇಟರ್ ಆಗಿ ದುಡಿಯುತ್ತಿದ್ದ ಗೌತಮ್‌ರಾಜ್ ಮಂಜೇಶ್ವರ ಹೊಸಬೆಟ್ಟುನಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ತಾಯಿ ಜತೆ ವಾಸವಾಗಿದ್ದರು. ಮಂಗಳವಾರ ಮಧ್ಯಾಹ್ನ ಊಟಕ್ಕೆ ಕರೆದಾಗ ಬಾರದಿರುವುದರಿಂದ ಹುಡುಕಾಡಿದಾಗ ಮನೆಯ ಕೊಠಡಿಯ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಇನ್ನೊಂದು ಘಟನೆಯಲ್ಲಿ ಕುಂಜತ್ತೂರು ಮರಿಯಾಶ್ರಮ ಚರ್ಚ್ ಕಾಂಪೌಡ್‌ನ ಬ್ರಯಾನ್ ಎಲ್ಬನ್ ಪಿಂಟೊ (20)ಅವರ ಮೃತದೇಹ ಮನೆಯಿಂದ ಸುಮಾರು 500ಮೀ. ದೂರದಲ್ಲಿರುವ ಹಳೇ ಮನೆಯ ಕೊಠಡಿಯೊಳಗೆ ಪತ್ತೆಯಾಗಿದೆ. ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಅವರನ್ನು ಹುಡುಕಾಡುವ ಮಧ್ಯೆ, ಅವರ ಸ್ಕೂಟರ್ ಹಳೇ ಮನೆ ಬಳಿ ಪತ್ತೆಯಾಗಿತ್ತು. ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.