

ಪುತ್ತೂರು ಗ್ರಾಮಾಂತರ: ಪಾರ್ಟ್‌ಟೈಮ್ ಜಾಬ್ ಇದೆ ಎಂದು ಇನ್‌ಸ್ಟಗ್ರಾಂನಲ್ಲಿ ಬಂದ ಸಂದೇಶ ನಂಬಿ ನೆಟ್ಟಣಿಗೆ ಮುಡ್ನೂರು ಗ್ರಾಮದ ಮಡ್ಯಳಮಜಲಿನ ಯುವತಿಯೊಬ್ಬರು ವಂಚಕರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 3.5 ಲಕ್ಷ ರೂ. ಹಣ ವರ್ಗಾಯಿಸಿ ಮೋಸ ಹೋದ ಘಟನೆ ನಡೆದಿದೆ.
ಮಡ್ಯಳಮಜಲು ನಿವಾಸಿ ಆಶಾ ವಂಚನೆಗೊಳಗಾದವರು. ಈ ಕುರಿತು ಮಂಗಳೂರಿನ ಸೆನ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ. ತನ್ನ ಇನ್‌ಸ್ಟಗ್ರಾಂ ಖಾತೆಗೆ ಪಾರ್ಟ್‌ಟೈಮ್ ಜಾಬ್ ಇದೆ ಎಂಬ ಜಾಹೀರಾತೊಂದು ಬಂದಿತ್ತು. ಅದನ್ನು ಸಂಪರ್ಕಿಸಿದಾಗ ಟಾರ್ಗೆಟ್ ಕಾರ್ಪೋರೇಶನ್ ಇಂಡಿಯಾ ಎಂಬ ಕಂಪನಿಯಲ್ಲಿ ವರ್ಕ್ ಫ್ರಮ್ ಹೋಂ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ವಾಟ್ಸಾೃಪ್‌ಗೆ ಸಂದೇಶ ಬಂದಿತ್ತು. ಆ ಸಂದೇಶದ ಲಿಂಕ್ ಒತ್ತಿದಾಗ ಪ್ರತಿ ದಿನ ಟಾರ್ಗೆಟ್ ಟಾಸ್ಕ್ ಪೂರ್ಣಗೊಳಿಸಲು ಅಪರಿಚಿತರು ಸೂಚಿಸಿದ್ದರು. ಕಂಪನಿ ಹೆಸರಿನಲ್ಲಿ ಅಪರಿಚಿತರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 3,50,596 ರೂ. ವರ್ಗಾವಣೆ ಮಾಡಿದ್ದು, ಆ ಬಳಿಕವಷ್ಟೇ ತನಗೆ ವಂಚನೆಗೊಳಗಾಗಿರುವ ಅರಿವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.