

ಪುತ್ತೂರು ಗ್ರಾಮಾಂತರ : ಈಶ್ವರಮಂಗಲ ಪೊಲೀಸ್ ಹೊರಠಾಣೆ ಸ್ವಂತ ಕಟ್ಟಡ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲದೆ ಸಂಕಷ್ಟದಲ್ಲಿದೆ. ಈಗ ಇರುವ ಬಾಡಿಗೆ ಕಟ್ಟಡವನ್ನೂ ಬಿಟ್ಟುಕೊಡಬೇಕಾಗಿದ್ದು, ಹೊಸ ಕಟ್ಟಡ ನಿರ್ಮಾಣಕ್ಕಾಗಿ ಜಾಗ ಕಾದಿರಿಸಿ ಹಲವು ವರ್ಷ ಕಳೆದರೂ ಹೊಸ ಕಟ್ಟಡದ ಭಾಗ್ಯ ಇನ್ನೂ ಕೂಡಿ ಬಂದಿಲ್ಲ.
ಪುತ್ತೂರು ಗ್ರಾಮಾಂತರ(ಸಂಪ್ಯ) ಪೊಲೀಸ್ ಠಾಣೆಗೆ ಸಂಬಂಧಿಸಿದ ಈಶ್ವರಮಂಗಲ ಪೊಲೀಸ್ ಹೊರಠಾಣೆ 13 ವರ್ಷಗಳಿಂದ ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಈಶ್ವರಮಂಗಲ ಶಾಖಾ ಕಟ್ಟಡದಲ್ಲಿ ಬಾಡಿಗೆಗೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಎಎಸ್‌ಐ ಸೇರಿದಂತೆ ಒಟ್ಟು 9 ಹುದ್ದೆಗಳಿದ್ದರೂ ಈಗ ಇರುವುದು ಒಬ್ಬರು ಎಎಸ್‌ಐ, ಒಬ್ಬರು ಹೆಡ್‌ಕಾನ್‌ಸ್ಟೆಬಲ್ ಮತ್ತು ಒಬ್ಬರು ಕಾನ್‌ಸ್ಟೆಬಲ್ ಮಾತ್ರ. ಆದರೆ ಇರುವ ಮಂದಿಗೂ ಇಲ್ಲಿ ಇಕ್ಕಟ್ಟಿನ ಕೊಠಡಿಗಳಲ್ಲಿ ಉಳಿದುಕೊಳ್ಳಲು ಸರಿಯಾದ ವಸತಿ ವ್ಯವಸ್ಥೆ ಇಲ್ಲ. ಹೊರಭಾಗದಲ್ಲಿ ಶೌಚಾಗೃಹವೂ ಸಮರ್ಪಕವಾಗಿಲ್ಲ. ಲಾಕಪ್, ಪೊಲೀಸ್ ಜೀಪು ಕೂಡಾ ಇಲ್ಲದೆ ಕೈ ಕಟ್ಟಿದಂತಿದೆ.
ಕಾವು ಸಹಕಾರಿಯ ಈಶ್ವರಮಂಗಲ ಶಾಖಾ ಕಟ್ಟಡದ ತಳಹಂತಸ್ತಿನಲ್ಲಿ 4 ಕೊಠಡಿಗಳನ್ನು ಬಾಡಿಗೆಗೆ ಪಡೆದು ಈಶ್ವರಮಂಗಲ ಪೊಲೀಸ್ ಹೊರಠಾಣೆ ಆರಂಭಿಸಲಾಗಿತ್ತು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ 2011ನೇ ಅಕ್ಟೋಬರ್ ತಿಂಗಳಲ್ಲಿ ಈ ಹೊರಠಾಣೆ ಉದ್ಘಾಟಿಸಿದ್ದರು. ಇದೇ ಕಟ್ಟಡದಲ್ಲಿ ಅಂದಿನಿಂದ ಇಂದಿನವರೆಗೆ ಪೊಲೀಸರು ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.
ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಈಶ್ವರಮಂಗಲ ಶಾಖಾ ಕಟ್ಟಡದಲ್ಲಿ ವ್ಯವಹಾರ ವಿಸ್ತರಿಸುವ ನಿಟ್ಟಿನಲ್ಲಿ 2017ರಲ್ಲಿಯೇ ಕಟ್ಟಡ ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡಿತ್ತು. ಆದರೆ ಪರ್ಯಾಯ ವ್ಯವಸ್ಥೆಯಾಗದ ಕಾರಣ ಮತ್ತೆ ಬಾಡಿಗೆ ಚೀಟಿ ಅವಧಿಯನ್ನು ವಿಸ್ತರಿಸಿದ್ದರು. ಆ ಬಳಿಕವೂ ಹಲವು ಬಾರಿ ಕಟ್ಟಡ ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡಿದ್ದ ಸಂಘದ ಆಡಳಿತ ಮಂಡಳಿ, ಈ ಬಾರಿ ಮಾಡಿಕೊಂಡ ಬಾಡಿಗೆ ಚೀಟಿ ಅವಧಿ ಜುಲೈ 31ಕ್ಕೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಮತ್ತೆ ಕಟ್ಟಡ ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡಿದೆ. ಈ ಬಾರಿ ಇಲಾಖೆಯವರೇ ಜು.30ರಂದು ಕಟ್ಟಡ ಬಿಟ್ಟುಕೊಡುವುದಾಗಿ ಲಿಖಿತವಾಗಿ ತಿಳಿಸಿದ್ದಾರೆ. ಹಾಗಾಗಿ ಹೊರಠಾಣೆಗೆ ಬೇರೆ ಬಾಡಿಗೆ ಕಟ್ಟಡ ಹುಡುಕಬೇಕಾದ ತುರ್ತು ಅನಿವಾರ್ಯತೆ ಎದುರಾಗಿದೆ.
ಹೊರಠಾಣೆಯ ವ್ಯಾಪ್ತಿಯ ನೆಟ್ಟಣಿಗೆ, ಮುಡ್ನೂರು ಮತ್ತು ಪಡುವನ್ನೂರು ಗಡಿಭಾಗದ ಗ್ರಾಮಗಳಾಗಿವೆ. ಗಡಿಪ್ರದೇಶ ವ್ಯಾಪ್ತಿಯಲ್ಲಿ ಹೆಚ್ಚಿನ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದರಿಂದ ಇಲ್ಲಿನ ಪೊಲೀಸರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಆದರೆ ಇಲ್ಲಿ ವ್ಯವಸ್ಥಿತವಾದ ಠಾಣೆ ಹಾಗೂ ಸಿಬ್ಬಂದಿ ಇಲ್ಲ. ಪೊಲೀಸರಿಗೆ ಓಡಾಡಲೊಂದು ಇಲಾಖಾ ವಾಹನವೂ ಇಲ್ಲದೆ ನಾಮ್ ಕೆ ವಾಸ್ತೆ ವ್ಯವಸ್ಥೆಯಂತಿದೆ.
ಈಗ ಇರುವ ಪೊಲೀಸ್ ಹೊರ ಠಾಣೆಯ ಸಮೀಪದಲ್ಲೇ 50 ಸೆಂಟ್ಸ್ ಜಾಗ ಮಂಜೂರು ಮಾಡಿ ಇಲಾಖೆಯ ಹೆಸರಿನಲ್ಲಿ ಆ ಜಾಗದ ಪಹಣಿ ಪತ್ರವೂ ಆಗಿದೆ. 8 ವರ್ಷದ ಹಿಂದೆ ಆಗಿನ ಶಾಸಕಿ ಶಕುಂತಳಾ ಶೆಟ್ಟಿ ಹೊಸ ಕಟ್ಟಡಕ್ಕಾಗಿ ಗೃಹ ಸಚಿವರಾಗಿದ್ದ ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಆ ಬಳಿಕ ಈ ವಿಚಾರದಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ. ಬಳಿಕ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರವೂ ಈ ಬಗ್ಗೆ ಗಮನಹರಿಸಿಲ್ಲ.
ಸಂಘದ ಅವಶ್ಯಕತೆಗನುಗುಣವಾಗಿ ಕಟ್ಟಡವನ್ನು ಬಿಟ್ಟುಕೊಡುವಂತೆ ಕೆಲವು ಬಾರಿ ಮನವಿ ಮಾಡಿಕೊಂಡಿದ್ದೆವು. ಸಂಘದ ವ್ಯವಹಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಅಡಕೆ ದಾಸ್ತಾನು, ರಾಸಾಯನಿಕ ರಸಗೊಬ್ಬರ ದಾಸ್ತಾನಿರಿಸಲು ಸ್ಥಳಾವಕಾಶದ ಕೊರತೆ ಎದುರಾಗಿದೆ. ಸಂಘದ ಸ್ವಂತ ಉಪಯೋಗಕ್ಕಾಗಿ ಕಟ್ಟಡ ಬಿಟ್ಟುಕೊಡುವಂತೆ ಇತ್ತೀಚೆಗೆ ದ.ಕ ಜಿಲ್ಲಾ ಎಸ್ಪಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದೆವು. ಜು.31ರಂದು ಕಟ್ಟಡ ಬಿಟ್ಟುಕೊಡುವುದಾಗಿ ಲಿಖಿತ ಭರವಸೆ ಕೊಟ್ಟಿದ್ದಾರೆ. - ನನ್ಯ ಅಚ್ಯುತ ಮೂಡೆತ್ತಾಯ, ಕಾವು ಸಿಎ ಬ್ಯಾಂಕ್ ಅಧ್ಯಕ್ಷ ಈಶ್ವರಮಂಗಲ ಪೊಲೀಸ್ ಹೊರಠಾಣೆಗೆ ಸ್ವಂತ ಕಟ್ಟಡದ ಅವಶ್ಯಕತೆಯಿದೆ. ಗಡಿಪ್ರದೇಶವಾಗಿರುವ ಕಾರಣ ಅಲ್ಲಿ ಈ ಹಿಂದೆಯೇ ಹೊರಠಾಣಾ ಕಟ್ಟಡ ನಿರ್ಮಾಣ ಆಗಬೇಕಿತ್ತು. ಕಟ್ಟಡ ನಿರ್ಮಾಣಕ್ಕೆ ಬೇಕಾದ ಜಾಗವಿದ್ದು ನೂತನ ಕಟ್ಟಡ ನಿರ್ಮಾಣ ಮಾಡಲು ಅನುದಾನ ಒದಗಿಸುವಂತೆ ಗೃಹ ಸಚಿವರ ಜತೆ ಮಾತನಾಡುತ್ತೇನೆ. ಸಿಬ್ಬಂದಿ ಕೊರತೆ ನೀಗಿಸುವ ಬಗ್ಗೆಯೂ ಪ್ರಯತ್ನಿಸುತ್ತೇನೆ. - ಅಶೋಕ್‌ಕುಮಾರ್ ರೈ, ಪುತ್ತೂರು ಶಾಸಕ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಬಹಳ ಪ್ರಯತ್ನಪಟ್ಟಿದ್ದರೂ ಕಟ್ಟಡ ನಿರ್ಮಾಣವಾಗಿರಲಿಲ್ಲ. ಇದೀಗ ಶಾಸಕ ಅಶೋಕ್‌ಕುಮಾರ್ ರೈ ಅವರ ಗಮನಕ್ಕೂ ಈ ವಿಚಾರ ತಂದಿದ್ದೇವೆ. ಈಗಲೂ ಪರಮೇಶ್ವರ್ ಅವರೇ ಗೃಹ ಸಚಿವರಾಗಿದ್ದಾರೆ. ಶಾಸಕರ ಮೂಲಕ ಗೃಹ ಸಚಿವರಿಗೆ ಒತ್ತಡ ಹಾಕುವ ಕಾರ್ಯ ಮಾಡುತ್ತೇವೆ. - ಶ್ರೀರಾಮ ಪಕ್ಕಳ ಕರ್ನೂರುಗುತ್ತು, ಗ್ರಾಮ ಪಂಚಾಯಿತಿ ಸದಸ್ಯ