ದೋಣಿ ಪಲ್ಟಿಯಾಗಿ ಒಂದು ಗಂಟೆ ನೀರಲ್ಲೇ ಇದ್ದ ಒಂಬತ್ತು ಮಂದಿ ಮೀನುಗಾರರ ರಕ್ಷಣೆ

drowned-in-river1650805670
Published on

ಬೈಂದೂರು: ಮೀನುಗಾರಿಕೆಗೆ ತೆರಳಿದ್ದ ಉಪ್ಪುಂದ ಗ್ರಾಮದ ಪಾಳ್ಯಗಾರತೊಪ್ಲು ಪುಂಡಲಿಕ ಎಂಬುವರ ಶ್ರೀ ದುರ್ಗಾಪರಮೇಶ್ವರಿ ಹೆಸರಿನ ದೋಣಿ ಶುಕ್ರವಾರ ಬೆಳಗ್ಗೆ ಕೊಡೇರಿ ಬಂದರಿನಿಂದ ಐದು ನಾಟಿಕಲ್ ಮೈಲಿ ದೂರದಲ್ಲಿ ಅಲೆಗೆ ಸಿಕ್ಕಿ ಮಗುಚಿಬಿದ್ದಿದೆ. ಅದರಲ್ಲಿದ್ದ 9 ಮಂದಿ ಮೀನುಗಾರರು ಪಾರಾಗಿದ್ದು, ಬಲೆ ಮತ್ತು ಇಂಜಿನ್ ಸಂಪೂರ್ಣ ಹಾನಿಗೀಡಾಗಿದೆ.

6 ದೋಣಿಗಳಲ್ಲಿ ಸ್ಥಳೀಯ ಮೀನುಗಾರರ ಸಹಾಯ

ದೋಣಿಯಲ್ಲಿದ್ದ ಕುಪ್ಪಯ್ಯ ಎಂಬುವರು ಸುಮಾರು ಹತ್ತು ಕಿಲೋ ಮೀಟರ್ ದೂರದಲ್ಲಿ ಬಲೆಗಳ ನಡುವೆ ಸಿಕ್ಕಿ ಬಿದ್ದಿರುವುದನ್ನು ಗಮನಿಸಿದ ಚಂದ್ರ ಎಂಬುವರು ಇತರ ಮೀನುಗಾರರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ 6 ದೋಣಿಗಳಲ್ಲಿ ಸ್ಥಳಕ್ಕೆ ಬಂದ ಇತರೇ ಮೀನುಗಾರರು ಒಂದು ಗಂಟೆ ಕಾಲ ನೀರಿನಲ್ಲೇ ಇದ್ದ ಮೀನುಗಾರರನ್ನು ರಕ್ಷಣೆ ಮಾಡಿ ಮರವಂತೆ ಬಂದರಿಗೆ ಕರೆತಂದಿದ್ದಾರೆ, ದೋಣಿಯಲ್ಲಿ ತುಂಬಿದ್ದ ನೀರನ್ನು ಖಾಲಿ ಮಾಡಿ ಅದನ್ನೂ ದಡಕ್ಕೆ ಎಳೆತಂದಿದ್ದಾರೆ.

ಲೈಫ್ ಜಾಕೆಟ್ ಧರಿಸಿದರೆ ಕ್ಷೇಮ

ಮಳೆಗಾಲದಲ್ಲಿ ಸಮುದ್ರ ನೀರು ತಂಪಾಗಿರುವುದರಿಂದ ಮೀನುಗಾರರಿಗೆ ಹೆಚ್ಚು ಸಮಯ ನೀರಿನಲ್ಲಿ ಇರಲು ಸಾಧ್ಯವಾಗುವುದಿಲ್ಲ. ಮೀನುಗಾರಿಕೆಗೆ ತೆರಳುವಾಗ ಸರ್ಕಾರದ ನಿಯಮದಂತೆ ಲೈಫ್ ಜಾಕೆಟ್ ಧರಿಸುವುದು ಕಡ್ಡಾಯ. ಲೈಫ್ ಜಾಕೆಟ್ ಬಳಸಿದರೆ ಒಂದು ತಾಸು ತನಕ ಕಡಲಲ್ಲಿ ಇರಬಹುದು. ನಂತರ ಉಸಿರಾಟದ ಸಮಸ್ಯೆಯಿಂದ ಕಷ್ಟವಾಗುತ್ತದೆ ಎಂದು ಹಿರಿಯ ಮೀನುಗಾರ ದೋಣಿಮನೆ ಗೋವಿಂದ ಖಾರ್ವಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net