ಟಿಪ್ಪರ್‌ನೊಳಗೆ ನುಗ್ಗಿ ನಾಗರಹಾವು ಅವಾಂತರ

nagarahavu
ಟಿಪ್ಪರ್‌ನೊಳಗೆ ಹೋಗಿದ್ದ ಹಾವನ್ನು ಉರಗತಜ್ಞ ಗೋವರ್ಧನ ಭಟ್ ರಕ್ಷಿಸಿದರು.
Published on

ಪಡುಬಿದ್ರಿ: ಹೆದ್ದಾರಿ ದಾಟುತ್ತಿದ್ದ ನಾಗರಹಾವೊಂದು ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್‌ನೊಳಗೆ ಹೋಗಿ ಅವಾಂತರ ಸೃಷ್ಟಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳ ಸೇತುವೆ ಬಳಿ ಗುರುವಾರ ಸಂಜೆ ನಡೆದಿದೆ.

ಹೆದ್ದಾರಿ ದಾಟುತ್ತಿದ್ದ ನಾಗರಹಾವು

ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಹಾವನ್ನು ರಕ್ಷಿಸುವ ನಿಟ್ಟಿನಲ್ಲಿ ಸ್ಥಳೀಯರು ಪ್ರಯತ್ನಿಸುತ್ತಿದ್ದಾಗ, ಸ್ಥಳಕ್ಕೆ ಬಂದ ದಾಮೋದರ ಪಾಂಗಾಳ ಅವರು ಹಾವನ್ನು ರಕ್ಷಿಸಿ, ಸುರಕ್ಷಿತ ಪ್ರದೇಶಕ್ಕೆ ತೆರಳಲು ದಾರಿ ಮಾಡಿಕೊಟ್ಟಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಟಿಪ್ಪರ್‌ನ ಚಾಲಕ, ಸರ್ವೀಸ್ ರಸ್ತೆಯಲ್ಲಿ ಟಿಪ್ಪರ್ ನಿಲ್ಲಿಸಿ ನಾಗರಹಾವು ರಕ್ಷಣಾ ಕಾರ್ಯಾಚರಣೆ ನೋಡಲು ಬಂದಿದ್ದನು.

ಟಿಪ್ಪರ್ ಏರಿದ ಹಾವು

ಹೆದ್ದಾರಿ ಬಿಟ್ಟು ಸರ್ವೀಸ್ ರಸ್ತೆಗೆ ಬಂದ ನಾಗರಹಾವು, ಅಲ್ಲಿ ನಿಲ್ಲಿಸಿದ್ದ ಟಿಪ್ಪರ್‌ನ ಕೆಳಕ್ಕೆ ಹೋಗಿ ನಂತರ ಟಿಪ್ಪರ್‌ನ ಒಳಗೆ ಪ್ರವೇಶಿಸಿತು. ಇದನ್ನು ಗಮನಿಸಿದ ಸ್ಥಳೀಯರು ಟಿಪ್ಪರ್ ಚಾಲಕನಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಟಿಪ್ಪರ್ ಚಾಲಕ ಗಂಗಾಧರ ಎಂಬಾತ ವಿಷಯ ಕೇಳಿ ಆತಂಕಿತರಾದರು. ಚಾಲಕ ಸೇರಿದಂತೆ ಸ್ಥಳೀಯರು ನಾಗರಹಾವನ್ನು ಟಿಪ್ಪರ್‌ನಿಂದ ಓಡಿಸಲು ಪ್ರಯತ್ನಿಸಿದ್ದು ಈ ಪ್ರಯತ್ನದಲ್ಲಿ ಎಲ್ಲರೂ ವಿಫಲರಾಗಿದ್ದರು. ಬಳಿಕ ಉರಗತಜ್ಞ ಗೋವರ್ಧನ ಭಟ್ ಸ್ಥಳಕ್ಕೆ ಧಾವಿಸಿ ಟಿಪ್ಪರ್‌ನ ಒಳಗಿದ್ದ ಹಾವನ್ನು ಹೊರಗೆ ತೆಗೆದು, ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net