ಅಗ್ನಿ ದುರಂತ ಘಟನೆ ನೋವು ತಂದಿದೆ:ತುಷಾರ್ ಗಿರಿನಾಥ್ ಭಾವುಕ

shivakumar1
Published on

ಬೆಂಗಳೂರು: ಪಾಲಿಕೆ ಇತಿಹಾಸದಲ್ಲೇ ಅಗ್ನಿ ದುರಂತ ಘಟನೆ ನಡೆದಿರುವುದು ತುಂಬ ನೋವಾಗಿದೆ. ಅಧೀಕ್ಷಕ ಅಭಿಯಂತರ ಶಿವಕುಮಾರ್‌ನನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟರು ಸಾಧ್ಯವಾಗಲಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭಾವುಕರಾದರು.

ಪಾಲಿಕೆ ಕೇಂದ್ರ ಕಚೇರಿಯ ಡಾ.ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಇತ್ತೀಚಿಗಷ್ಟೇ ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದ ಶಿವಕುಮಾರ್‌ಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ಪಾಲಿಕೆಯಲ್ಲಿ ಪ್ರತಿ ಅಧಿಕಾರಿ,ಸಿಬ್ಬಂದಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಕೆಲವೊಮ್ಮೆ ಹಗಳಿರಳು ಕೆಲಸ ಮಾಡುತ್ತಾರೆ. ಅಗ್ನಿ ಅವಘಡ ಸಂದರ್ಭದಲ್ಲಿ ಶಿವಕುಮಾರ್ ತನ್ನ ಪ್ರಾಣವನ್ನು ಲೆಕ್ಕಿಸದೆ ಸ್ಥಳದಲ್ಲಿದ್ದ ನೌಕರರನ್ನು ಕಾಪಾಡಿ ಕೊನೆಗೆ ಅವರು ಹೊರ ಬಂದಿದ್ದರು. ಒಳ್ಳೆಯ ಅಧಿಕಾರಿಯಾಗಿದ್ದರು. ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಮೃತ ಕುಟುಂಬಕ್ಕೆ ಪರಿಹಾರ ಹಾಗೂ ಸರ್ಕಾರಿ ನೌಕರಿ ನೀಡುವ ಬಗ್ಗೆ ಈಗಾಗಲೇ ಸರ್ಕಾರ ಜತೆ ಸಮಾಲೋಚಿಸಲಾಗಿದೆ. ಶಿವಕುಮಾರ್ ಪತ್ನಿಗೆ ಸರ್ಕಾರಿ ನೌಕರಿ ನೀಡುವ ಎಂದು ಹೇಳಿದರು. ಪಾಲಿಕೆಯ ವಿವಿಧ ವೃಂದದ ಅಧಿಕಾರಿಗಳು ಉಪಸ್ಥಿತರಿದ್ದರು.

95 ಲಕ್ಷ ನೆರವು: ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ದರ್ಜೆಯ ನೌಕರರ ವೇತನ ಹಣವನ್ನು ಕಟಾವು ಮಾಡಿ ಅಂದಾಜು 95.5 ಲಕ್ಷ ರೂ.ಹಣವನ್ನು ಶಿವಕುಮಾರ್ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಗುವುದು. ಶೀಘ್ರದಲ್ಲೇ ಮುಖ್ಯ ಆಯುಕ್ತರ ಸಮ್ಮುಖದಲ್ಲಿ ಚೆಕ್ ಹಸ್ತಾಂತರ ಮಾಡುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್ ಹೇಳಿದ್ದಾರೆ. ಶಿವಕುಮಾರ್ ಸವಿ ನೆನಪಿಗಾಗಿ ಎರಡು ಆಂಬುಲೆನ್ಸ್‌ಗಳನ್ನು ಉಚಿತವಾಗಿ ಪಾಲಿಕೆಗೆ ಹಸ್ತಾಂತರಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net