

ಚಾಮರಾಜನಗರ: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮುನ್ನುಡಿಯಾದ ಗಜಪಯಣಕ್ಕೆ ಚಾಲನೆ ದೊರೆತಿದೆ. ಮತ್ತೊಂದೆಡೆ, ಅರಸರ ಮನೆಯ ಮಗಳಿಗೆ ತಾವೇ ಸಾಕಿದ್ದ ಆನೆ ಮೇಲೆ ಇರುವ ಅನನ್ಯ ಪ್ರೀತಿಯೂ ಅನಾವರಣಗೊಂಡಿದೆ…!
ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಕೊನೆಯ ಮಗಳು ದಿ.ವಿಶಾಲಾಕ್ಷಿದೇವಿ ಅವರ ಪುತ್ರಿ ಶ್ರುತಿಕೀರ್ತಿ ದೇವಿ ಮತ್ತು ಬಂಡೀಪುರದಿಂದ ದಸರಾಗೆ ಆಯ್ಕೆಯಾಗಿರುವ ರಾಂಪುರ ಶಿಬಿರದ 21 ವರ್ಷದ ಸಾಕಾನೆ ರೋಹಿತ್ ನಡುವಿನ ಅನುಬಂಧಕ್ಕೆ ಇತಿಹಾಸವಿದೆ.
ಅಂದು ವಿಶಾಲಾಕ್ಷಿದೇವಿ ಅವರು ಸಾಕಿದ್ದ ಮರಿ ಆನೆಯೇ ಈ ರೋಹಿತ್. ಇವರೊಂದಿಗೆ ಶ್ರುತಿಕೀರ್ತಿ ದೇವಿ ಆಟವಾಡಿ ಬೆಳೆದ ನೆನಪುಗಳಿವೆ. ವಿಶಾಲಾಕ್ಷಿದೇವಿ ತೀರಿಹೋದ ಬಳಿಕ ರೋಹಿತ್ನನ್ನು ನೋಡಲು ಆಗಾಗ್ಗೆ ಶ್ರುತಿಕೀರ್ತಿ ದೇವಿ ರಾಂಪುರಕ್ಕೆ ಬರುತ್ತಿದ್ದರು. ಅಲ್ಲದೆ, ಬಂಡೀಪುರದ ಮದ್ದೂರು ವಲಯದ ಅರಣ್ಯ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಗಜಪಯಣದ ಸಂದರ್ಭದಲ್ಲಿ ಭೇಟಿ ನೀಡಿದ್ದ ಶ್ರುತಿಕೀರ್ತಿ ದೇವಿ, ರೋಹಿತ್ನನ್ನು ನೋಡಿ ಮುದ್ದಾಡಿದರು. ರೋಹಿತ್ ಕೂಡ ಸೊಂಡಿಲೆತ್ತಿ ಪ್ರೀತಿ ತೋರಿತು. ಈ ಸಂದರ್ಭವನ್ನು ಕಣ್ತುಂಬಿಕೊಂಡವರಿಗೆ ಶ್ರುತಿ ಮತ್ತು ರೋಹಿತ್ ನಡುವಿನ ಬಾಂಧವ್ಯ ಅರಿವಾಯಿತು.
ತಾಯಿಯಂತೆ ಮಗಳು
ವಿಶಾಲಾಕ್ಷಿ ದೇವಿ ಪ್ರಾಣಿಪ್ರಿಯರಾಗಿದ್ದರು. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಸಮೀಪದಲ್ಲಿ ರೆಸಾರ್ಟ್ ಹೊಂದಿದ್ದರು. ಹಲವು ವರ್ಷಗಳ ಹಿಂದೆ ಕಬ್ಬಿನ ಗದ್ದೆಯಲ್ಲಿ ತಾಯಿ ಇಲ್ಲದೆ ಅನಾಥವಾಗಿದ್ದ ಎರಡು ಚಿರತೆ ಮರಿಗಳು ಸಿಕ್ಕಿದ್ದವು. ಅವುಗಳನ್ನು ವಿಶಾಲಾಕ್ಷಿದೇವಿ ಮಕ್ಕಳಂತೆ ಸಾಕಿದ್ದರು. ನಂತರ ಅವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು. ಅದೇ ರೀತಿ ಹೆಡಿಯಾಲದಲ್ಲಿ ತಾಯಿ ಆನೆಯೊಂದು ಮೃತಪಟ್ಟಿತ್ತು. ಆಗ ಜತೆಗಿದ್ದ ಮರಿಯಾನೆಯನ್ನು ಆರೈಕೆ ಮಾಡುವ ಅವಕಾಶ ವಿಶಾಲಾಕ್ಷಿ ದೇವಿ ಅವರಿಗೆ ಸಿಕ್ಕಿತ್ತು. ತಮ್ಮ ರೆಸಾರ್ಟ್ನಲ್ಲಿ ಈ ಮರಿಯಾನೆಯನ್ನು ಚೆನ್ನಾಗಿ ಸಾಕಿದ ವಿಶಾಲಾಕ್ಷಿದೇವಿ ಅದಕ್ಕೆ ಪೃಥ್ವಿರಾಜ್ ಎಂದು ಹೆಸರಿಟ್ಟಿದ್ದರು. ಪೃಥ್ವಿರಾಜ್ನೊಂದಿಗೆ ಶ್ರುತಿಕೀರ್ತಿ ದೇವಿ ಆಟವಾಡುತ್ತಿದ್ದರು. ಚಿಕ್ಕವಯಸ್ಸಿನಲ್ಲೇ ಇಬ್ಬರ ನಡುವೆ ಬಾಂಧವ್ಯ ಬೆಳೆದಿತ್ತು. ನಂತರದ ದಿನಗಳಲ್ಲಿ ಈ ಆನೆಯನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಯಿತು. ರಾಂಪುರ ಶಿಬಿರಕ್ಕೆ ಸೇರಿದ ಈ ಆನೆಗೆ ‘ರೋಹಿತ್’ ಎಂದು ಮರುನಾಮಕರಣ ಮಾಡಲಾಯಿತು.
ಹೀಗೆ ತಾಯಿಯಿಂದ ಮಗಳಿಗೆ ಬಳುವಳಿಯಾಗಿ ಬಂದ ಪ್ರಾಣಿಪ್ರೀತಿ ಶ್ರುತಿಕೀರ್ತಿ ದೇವಿ ಅವರನ್ನು ಆಗಾಗ್ಗೆ ರೋಹಿತ್ನತ್ತ ಸೆಳೆಯುತ್ತಿದೆ. ಹಾಗಾಗಿ, ರಾಂಪುರ ಶಿಬಿರಕ್ಕೆ ಭೇಟಿ ನೀಡುವ ಶ್ರುತಿಕೀರ್ತಿ ದೇವಿ, ರೋಹಿತ್ನೊಂದಿಗೆ ಕಾಲ ಕಳೆಯುತ್ತಾರೆ. ಯೋಗಕ್ಷೇಮ ವಿಚಾರಿಸುತ್ತಾರೆ. ರೋಹಿತ್ನನ್ನು ತಾಯಿ ವಿಶಾಲಾಕ್ಷಿದೇವಿ ಇಟ್ಟಿದ್ದ ಪೃಥ್ವಿರಾಜು ಹೆಸರಿನಿಂದಲೇ ಶ್ರುತಿಕೀರ್ತಿ ದೇವಿ ಕರೆಯುತ್ತಾರೆ. ರೋಹಿತ್ ಕೂಡ ಶ್ರುತಿಕೀರ್ತಿ ದೇವಿ ಕಂಡ ಕೂಡಲೇ ಸಂತಸ ತೋರುತ್ತದೆ.
ಎರಡನೇ ತಂಡದಲ್ಲಿರುವ ರೋಹಿತ್:
ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಶುಕ್ರವಾರ ಗಜಪಯಣಕ್ಕೆ ಚಾಲನೆ ಸಿಕ್ಕಿದೆ. ಈ ಗಜಪಡೆಯನ್ನು ಸೇರಿಕೊಳ್ಳಲು ಬಂಡೀಪುರದಿಂದ ರಾಂಪುರ ಶಿಬಿರದ ಸಾಕಾಣೆಗಳಾದ ರೋಹಿತ್, ಹಿರಣ್ಯಾ ಆಯ್ಕೆಯಾಗಿವೆ. ಎರಡನೇ ತಂಡದಲ್ಲಿ ರೋಹಿತ್ ಮತ್ತು ಹಿರಣ್ಯಾ ಇದ್ದಾರೆ. ಮೈಸೂರು ಅರಸರ ಮಗಳು ಸಾಕಿ ಸಲಹಿದ್ದ ರೋಹಿತ ದಸರಾದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆ ಮತ್ತು ಸಾರ್ಥಕತೆಯ ಭಾವ ಮೂಡಿಸಲಿದೆ.
ರೋಹಿತ್ ನಮ್ಮ ಹತ್ರ ಬಂದಾಗ ಆರು ತಿಂಗಳ ಕೂಸು. ನಮ್ಮ ತಾಯಿ ಅದನ್ನು ಬಹಳ ಪ್ರೀತಿಯಿಂದ ಬೆಳೆಸಿದ್ದರು. ರೋಹಿತ್ ನಮ್ಮ ಮನೆಯ ಮಗನೇ ಆಗಿದ್ದ. ಅದಕ್ಕೆ 14 ವರ್ಷ ತುಂಬಿದ ಬಳಿಕ ಬಂಡಿಪುರ ಆನೆ ಕ್ಯಾಂಪ್ಗೆ ಹಸ್ತಾಂತರ ಮಾಡಿದ್ದೆವು. ಇಂದಿಗೂ ಅದರ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ. ನನ್ನನ್ನು ಕಂಡರೆ ಈಗಲೂ ಅಷ್ಟೇ ಪ್ರೀತಿ ತೋರುತ್ತದೆ, ನನ್ನ ಹುಡುಕಿ ಓಡೋಡಿ ಬರುತ್ತದೆ. ಜಂಬೂ ಸವಾರಿಗೆ ರೋಹಿತ್ ಆಯ್ಕೆ ಆಗ್ತಿರೋದು ಖುಷಿ ತಂದಿದೆ.ಶ್ರುತಿಕೀರ್ತಿ ದೇವಿ, ದಿ.ವಿಶಾಲಾಕ್ಷಿದೇವಿ ಪುತ್ರಿ