

ಆನೇಕಲ್: ರಾತ್ರಿ ನಿಲ್ಲಿಸಿದ್ದ ಲಾರಿಯಲ್ಲಿ ಬೆಳಗ್ಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದು, ಪಕ್ಕದಲ್ಲೇ ಇದ್ದ ಇನ್ನೆರಡು ವಾಹನಗಳಿಗೂ ಬೆಂಕಿ ವ್ಯಾಪಿಸಿ ಅವು ಕೂಡ ಭಾಗಶಃ ಸುಟ್ಟು ಹೋಗಿವೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಈ ಅವಘಡ ಸಂಭವಿಸಿದೆ.
ಈ ಲಾರಿ ಹಣ್ಣುಗಳನ್ನು ತುಂಬಿಕೊಂಡು ಮಾರುಕಟ್ಟೆಗೆ ಬಂದಿದ್ದು, ಅನ್ಲೋಡ್ ಆದ ಬಳಿಕ ಚಾಲಕ ವಾಹನವನ್ನು ಅಲ್ಲೇ ನಿಲ್ಲಿಸಿ, ರಾತ್ರಿ ಅದರೊಳಗೇ ಮಲಗಿದ್ದ. ಆದರೆ ಬೆಳಗ್ಗೆ ಐದು ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಬಿಸಿಯಾದ ಅನುಭವವಾಗಿ ಬೆಚ್ಚಿಬಿದ್ದು, ವಾಹನದಿಂದ ಹೊರಕ್ಕೆ ಧುಮುಕಿ ಬಚಾವ್ ಆಗಿದ್ದಾನೆ. ಈ ಮೂಲಕ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮೊದಲಿಗೆ ಬೆಂಕಿ ಹೊತ್ತಿಕೊಂಡಿದ್ದ ಲಾರಿ ಬಹುತೇಕ ಸುಟ್ಟುಹೋಗಿದ್ದು, ಅಕ್ಕಪಕ್ಕದ ಇನ್ನೆರಡು ವಾಹನಗಳಿಗೆ ಬೆಂಕಿ ತಗುಲಿ ಅವು ಭಾಗಶಃ ಸುಟ್ಟುಹೋಗಿವೆ. ಬೆಂಕಿಯನ್ನು ಗಮನಿಸಿದ ಸ್ಥಳೀಯರು ಅದನ್ನು ಆರಿಸಲು ಮುಂದಾಗಿದ್ದು, ಅಷ್ಟರಲ್ಲಿ ಅಗ್ನಿಶಾಮಕ ದಳದವರೂ ಆಗಮಿಸಿದ್ದರಿಂದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು. ಹೆಬ್ಬಗೋಡಿ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.