

ರಾಯಚೂರು: ಇಲ್ಲಿನ ಚಿನ್ನದ ಹಟ್ಟಿಗಣಿಯಲ್ಲಿ ಅಗ್ನಿ ಅವಘಡ ಉಂಟಾಗಿದ್ದು, ಸುಮಾರು ಎರಡು ಗಂಟೆಯಿಂದ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು ಮತ್ತು ಕಂಪನಿಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯ ವಿಲೇಜ್ ಶಾಫ್ಟ್ನಲ್ಲಿ ಕಸಕ್ಕೆ ಹಚ್ಚಿದ ಬೆಂಕಿಯಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಗಣಿಯ ಆವರಣದಲ್ಲಿದ್ದ 500ಕ್ಕೂ ಹೆಚ್ಚು ಹಳೆಯ ಟಯರ್ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಅಷ್ಟೂ ಸುಟ್ಟು ಭಸ್ಮವಾಗಿವೆ.
ಎರಡಕ್ಕೂ ಗಂಟೆಗೂ ಹೆಚ್ಚು ಅವಧಿಯಿಂದ ಅಗ್ನಿಶಾಮಕ ದಳ ಹಾಗೂ ಕಂಪನಿ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ ಬೆಂಕಿಯನ್ನು ಇನ್ನೂ ಸಂಪೂರ್ಣವಾಗಿ ಆರಿಸಲು ಸಾಧ್ಯವಾಗಿಲ್ಲ. ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅವಘಡ ಉಂಟಾಗಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ.