

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಗೋದಾಮೊಂದು ಹೊತ್ತಿ ಉರಿದಿದೆ. ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇದ್ದಿದ್ದರಿಂದ ಭಾರಿ ಆತಂಕ ಉಂಟಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸುವ ಕಾರ್ಯಾಚರಣೆ ನಡೆಸಿದ್ದಾರೆ.
ಮೈಸೂರು ರಸ್ತೆಯ ಬ್ಯಾಟರಾಯನಪುರ ಬಳಿ ಇರುವ ಅನಂತ್ ಎಂಟರ್ಪ್ರೈಸಸ್ ಎಂಬ ಕೊರಿಯರ್ ಗೋಡೌನ್ನಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಗೋದಾಮಲ್ಲಿ ಕೊರಿಯರ್ ಬಾಕ್ಸ್ಗೆ ತಗುಲಿರುವ ಬೆಂಕಿಗೆ ಕಟ್ಟಡಕ್ಕೆ ಆವರಿಸಿದೆ. ಬೆಂಕಿಗೆ ಕಾರಣವೇನು ಎಂಬುದು ಖಚಿತವಾಗಿ ತಿಳಿದು ಬರದಿದ್ದರೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಕಟ್ಟಡದ ಪಕ್ಕದಲ್ಲೇ ಬಾರ್ ಆ್ಯಂಡ್ ರೆಸ್ಟೋರೆಂಟ್ ಇದ್ದು, ಅದರ ಕಿಟಕಿಯಿಂದ ಎಸೆದ ಸಿಗರೇಟ್ ಕಿಡಿಯಿಂದಲೂ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯೂ ಇದೆ.
ಇಂದು ಭಾನುವಾರ, ರಜೆ ದಿನವಾದ್ದರಿಂದ ಸಿಬ್ಬಂದಿ ಕೆಲಸದಲ್ಲಿ ಇರಲಿಲ್ಲ. ಇಲ್ಲದಿದ್ದರೆ ಸಾವು-ನೋವು ಸಂಭವಿಸುವ ಸಾಧ್ಯತೆ ಇತ್ತು. ಇನ್ನು ಗೋದಾಮಿನ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇದೆ. ಸ್ವಲ್ಪ ಬೆಂಕಿ ವ್ಯಾಪಿಸಿದ್ದರೂ ಭಾರಿ ಅನಾಹುತ ಉಂಟಾಗುವುದಿತ್ತು. ಆದರೆ ತಕ್ಷಣ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಗೋದಾಮಿನ ಬಾಗಿಲು ಮುರಿದು ಒಳಪ್ರವೇಶಿಸಿ ಬೆಂಕಿ ಆರಿಸಿದ್ದಾರೆ. ಅಗ್ನಿಶಾಮಕ ದಳದ ಜತೆ ಬ್ಯಾಟರಾಯನಪುರ ಪೊಲೀಸರು ಮತ್ತು ಸ್ಥಳೀಯರು ಬೆಂಕಿ ಆರಿಸಲು ಕೈಜೋಡಿಸಿದ್ದರು.
ನಮ್ಮ ಗೊದಾಮಿನಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಎರಡು ಬಾರಿ ಕಳ್ಳತನ ಆಗಿದ್ದು, ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಗೋದಾಮಿನಲ್ಲಿ ಕರೆಂಟ್ ಇರಲಿಲ್ಲ, ಸೆಕ್ಯುರಿಟಿ ಗಾರ್ಡ್ ಇರಲಿಲ್ಲ. ಭಾನುವಾರವಾದ್ದರಿಂದ ಕೆಲಸದವರೂ ಇರಲಿಲ್ಲ. ಯಾರೋ ಬೇಕಂತಲೇ ಬೆಂಕಿ ಹಾಕಿದ್ದಾರೆ. 20 ವರ್ಷಗಳಿಂದ ಇಲ್ಲಿ ಈ ಗೋದಾಮಿದೆ. ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಗ್ರಹಿಸಿ ಬೇರೆಡೆಗೆ ವಿತರಣೆ ಮಾಡುತ್ತಿದ್ದೇವೆ. ತುಂಬಾ ವಸ್ತುಗಳು ಹಾನಿಯಾಗಿವೆ, ಸದ್ಯ ಎಷ್ಟು ಹಾನಿಯಾಗಿದೆ ಎಂಬ ಅಂದಾಜು ಸಿಗುತ್ತಿಲ್ಲ ಎಂದು ಅನಂತ್ ಎಂಟರ್ಪ್ರೈಸಸ್ ಮಾಲೀಕ ತಿಳಿಸಿದ್ದಾರೆ.