

ಬೆಂಗಳೂರು: ರಾಜಧಾನಿಯ ಅಪಾರ್ಟ್ಮೆಂಟ್ವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಎರಡು ಫ್ಲ್ಯಾಟ್ಗಳು ಧಗಧಗಿಸುತ್ತಿದ್ದು, ನೋಡನೋಡುತ್ತಿದ್ದಂತೆ ಮಹಿಳೆಯೊಬ್ಬರು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದಾರೆ. ಬೆಂಗಳೂರಿನ ದೇವರಚಿಕ್ಕನಹಳ್ಳಿಯ ಆಶ್ರೀತ ಅಪಾರ್ಟ್ಮೆಂಟ್ನಲ್ಲಿ ಈ ಅಗ್ನಿಆಕಸ್ಮಿಕ ಸಂಭವಿಸಿದೆ.
ಮೂರನೇ ಮಹಡಿಯ ಫ್ಲ್ಯಾಟ್ವೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡಿದ್ದು, ಧಗ್ಗನೆ ಹೊತ್ತಿಕೊಂಡ ಬೆಂಕಿ ಪಕ್ಕದ ಫ್ಲ್ಯಾಟ್ಗೂ ಆವರಿಸಿದೆ. ಬೆಂಕಿಯನ್ನು ನೋಡಿ ಸ್ಥಳೀಯರು ಅಪಾರ್ಟ್ಮೆಂಟ್ ಬಳಿ ಜಮಾಯಿಸಿದ್ದು, ಮಹಿಳೆಯೊಬ್ಬರು ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದಾರೆ. ಯುಟಿಲಿಟಿಯಲ್ಲಿ ಈ ಮಹಿಳೆ ಇದ್ದು, ಸುತ್ತ ಗ್ರಿಲ್ ಇದ್ದಿದ್ದರಿಂದ ಬಚಾವಾಗಲು ಸಾಧ್ಯವಿರಲಿಲ್ಲ. ಅಪಾಯಕರ ಸ್ಥಿತಿಯಲ್ಲಿ ಮಹಿಳೆ ಸಿಲುಕಿಕೊಂಡಿದ್ದರೂ ಜನರು ಕೂಡ ಅಸಹಾಯಕರಾಗಿ ನೋಡುವಂಥ ಹೃದಯವಿದ್ರಾವಕ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿದ್ದು, ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ಮೂವರು ಸಾವಿಗೀಡಾಗಿರುವ ಸಾಧ್ಯತೆ ಇದ್ದು, ಈಗಾಗಲೇ ಐವರನ್ನು ಬೆಂಕಿಯಿಂದ ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ರಕ್ಷಣಾ ಹಾಗೂ ಬೆಂಕಿ ಆರಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಸಾವು-ನೋವಿನ ಕುರಿತ ಖಚಿತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.