ಗಂಡ-ಹೆಂಡತಿ ಜಗಳದ ದುರ್ಲಾಭ ಪಡೆಯಲು ಯತ್ನಿಸಿದ ಪೊಲೀಸ್​; ಇನ್​ಸ್ಪೆಕ್ಟರ್​-ಎಎಸ್​ಐ ವಿರುದ್ಧ ದಾಖಲಾಯಿತು ಎಫ್​​ಐಆರ್​

Jayaraj
ಪೊಲೀಸ್ ಇನ್​ಸ್ಪೆಕ್ಟರ್ ಜಯರಾಜ್
Published on

ಬೆಂಗಳೂರು: ಗಂಡ-ಹೆಂಡತಿಯ ಜಗಳದಲ್ಲಿ ದುರ್ಲಾಭ ಪಡೆಯಲು ಯತ್ನಿಸಿದ ಪೊಲೀಸ್ ಇನ್​ಸ್ಪೆಕ್ಟರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಎಫ್​ಐಆರ್ ದಾಖಲಿಸಿದೆ. ಬೆಂಗಳೂರಿನ ಕೆ.ಆರ್. ಪುರ ಠಾಣೆಯಲ್ಲಿ ಇನ್​ಸ್ಪೆಕ್ಟರ್ ಆಗಿದ್ದ ಜಯರಾಜ್​ ಆರೋಪಿ. ಅಲ್ಲದೆ ಎಎಸ್​ಐ ಶಿವಕುಮಾರ್ ಎಂಬವರ ವಿರುದ್ಧವೂ ಎಫ್​ಐಆರ್ ದಾಖಲಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಂಜು ರಾಜನ್ ಎಂಬವರ ವಿರುದ್ಧ ಆಕೆಯ ಪತ್ನಿ ದೂರು ದಾಖಲಿಸಿದ್ದರು. ಹೀಗಾಗಿ ಬಂಧನಕ್ಕೆ ಒಳಗಾಗಿದ್ದ ಸಂಜು ರಾಜನ್ ಬಳಿಕ ಜಾಮೀನಿನ ಮೇರೆಗೆ ಹೊರಬಂದಿದ್ದರು. ನಂತರ ಪ್ರತಿವಾರ ಠಾಣೆಗೆ ಆಗಮಿಸಿ ಸಹಿ ಮಾಡಲು ಸಂಜು ಅವರಿಂದ ಪೊಲೀಸರು 500ರಿಂದ 10 ಸಾವಿರ ರೂ. ವರೆಗೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿದೆ.

ಜಯರಾಜ್​ ಸದ್ಯ ಸಿಐಡಿಯಲ್ಲಿ ಕೆಲಸ ಮಾಡುತ್ತಿದ್ದು, ಶಿವಕುಮಾರ್​ ಕೆ.ಆರ್.ಪುರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಲಂಚ ಪಡೆದ ಬಗ್ಗೆ ದೂರು ಪಡೆದು ತನಿಖೆ ನಡೆಸಿದ ಎಸಿಬಿ ಅಧಿಕಾರಿಗಳು, ಇನ್​ಸ್ಪೆಕ್ಟರ್​ ವಿರುದ್ಧ ಕ್ರಮಕ್ಕೆ 17ಎ ಅಡಿ ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಅಲ್ಲಿಂದ ಅನುಮತಿ ಸಿಕ್ಕ ಬಳಿಕ ಇಬ್ಬರ ವಿರುದ್ಧವೂ ಎಫ್​ಐಆರ್ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net