

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪೊಲೀಸರು ಇತ್ತೀಚೆಗೆ ವಶಪಡಿಸಿಕೊಂಡಿದ್ದ ಒಂದೂವರೆ ಕೋಟಿ ರೂ. ಬೆಲೆಬಾಳುವ ಆ್ಯಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಕಂಡುಬಂದಿದೆ. ವಿಶೇಷವೆಂದರೆ ಒಬ್ಬನೇ ಆರೋಪಿ ಮನೆಯಲ್ಲಿ 10 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ಪತ್ತೆಯಾಗಿರುವುದು ಪ್ರಕರಣದ ಕುರಿತ ಕುತೂಹಲವನ್ನು ಹೆಚ್ಚಿಸಿದೆ.
ಡಿ.22ರಂದು ತಿಮಿಂಗಿಲ ವಾಂತಿ ಮಾರಾಟ ಮಾಡಲು ಯತ್ನಿಸಿದ್ದ ಆರು ಮಂದಿಯನ್ನು ಹೊಸಪೇಟೆ ಪೊಲೀಸರು ಬಂಧಿಸಿದ್ದು, ಅವರಿಂದ ಒಂದೂವರೆ ಕೋಟಿ ರೂ. ಬೆಲೆಬಾಳುವ ಆ್ಯಂಬರ್ ಗ್ರೀಸ್ ವಶಕ್ಕೆ ಪಡೆದಿದ್ದರು. ಈ ಪ್ರಕರಣದಲ್ಲಿ ಕೊಪ್ಪಳದ ವೆಂಕಟೇಶ್ ನಾಯ್ಕ್, ಅಬ್ದುಲ್ ವಹಾಬ್, ಭಟ್ಕಳದ ಗಣಪತಿ, ಹುಬ್ಬಳ್ಳಿಯ ಪುಂಡಲೀಕ್, ಮಹೇಶ್ ಹಾಗೂ ವಿಜಯಪುರದ ಶ್ರೀಧರ್ ಬಂಧನಕ್ಕೀಡಾಗಿದ್ದರು.
ಆರೋಪಿಗಳನ್ನು ಅಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಆ ಪೈಕಿ ಆರೋಪಿ ಭಟ್ಕಳದ ಗಣಪತಿ ಎಂಬಾತನನ್ನು ಮತ್ತೆ ವಶಕ್ಕೆ ಪಡೆದ ಪೊಲೀಸರು ಇನ್ನಷ್ಟು ವಿಚಾರಣೆಗೆ ಒಳಪಡಿಸಿ, ಮುರುಡೇಶ್ವರದಲ್ಲಿರುವ ಆತನ ಮನೆಯಿಂದ ಹತ್ತು ಕೆ.ಜಿ. ತಿಮಿಂಗಲ ವಾಂತಿ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಹತ್ತು ಕೋಟಿ ರೂ. ಎಂದು ಪೊಲೀಸರು ಅಂದಾಜಿಸಿದ್ದಾರೆ.
ಗಣಪತಿ ತನ್ನ ಮನೆಯಲ್ಲಿ ದಾಸ್ತಾನಿಟ್ಟಿದ್ದ ತಿಮಿಂಗಿಲ ವಾಂತಿ ಪೈಕಿ ಒಂದೂವರೆ ಕೆ.ಜಿ.ಯಷ್ಟನ್ನು ಹೊಸಪೇಟೆಯಲ್ಲಿ ಮಾರಾಟಕ್ಕೆ ಯತ್ನಿಸಿದಾಗ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದರು.