ಅಕ್ರಮ ಕೊಳವೆಬಾವಿ ಕೊರೆಸಿದವರಿಗೆ ಸಂಕಷ್ಟ; ರಾಜಧಾನಿಯಲ್ಲಿ 27 ಜನರ ವಿರುದ್ಧ ಎಫ್​ಐಆರ್​

Borwell
Published on

ರಾಮ ಕಿಶನ್​ ಕೆ.ವಿ.
ಬೆಂಗಳೂರು: ರಾಜಧಾನಿ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಕೊಳವೆಬಾವಿ ಕೊರೆದ ಮಾಲೀಕರಿಗೆ ಈಗ ಖಾಕಿ ಸಂಕಷ್ಟ ಎದುರಾಗಿದೆ. ಅನಧಿಕೃತವಾಗಿ ಕೊಳವೆಬಾವಿ ಕೊರೆಯಿಸಿರುವ ಸಂಬಂಧ ಕಳೆದ 15 ದಿನಗಳಲ್ಲಿ 27 ಜನರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.
ಅವೈಜ್ಞಾನಿಕವಾಗಿ ಕೊಳವೆಬಾವಿ ಕೊರೆಯುವುದರಿಂದ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕುಸಿಯುತ್ತಿದೆ. ಪರಿಣಾಮ ಜನವರಿ ಆರಂಭದಿಂದಲೇ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹೀಗಾಗಿ ಮಿತಿಮೀರಿ ಕೊಳವೆಬಾವಿ ಕೊರೆಯುವವರ ವಿರುದ್ಧ ಜಲಮಂಡಳಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ತಪ್ಪಿತಸ್ಥರಿಗೆ 6 ತಿಂಗಳವರೆಗೆ ಶಿಕ್ಷೆ ವಿಧಿಸಬಹುದಾಗಿದೆ.

ಮಾಹಿತಿ ನೀಡಲು ಮನವಿ:

ನಿಯಮ ಮೀರಿ ಕೊಳವೆಬಾವಿ ಕೊರೆಯುತ್ತಿರುವುದು ತಿಳಿದುಬಂದರೆ ಸಾರ್ವಜನಿಕರು ಹಿಂಜರಿಕೆಯಿಲ್ಲದೆ ಜಲಮಂಡಳಿಗೆ ದೂರು ನೀಡಬಹುದು. ಕೂಡಲೇ ಅಧಿಕಾರಿಗಳು ಪರಿಶೀಲಿಸಿ ಕಠಿಣ ಕ್ರಮ ಜರುಗಿಸುತ್ತಾರೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ.ರಾಮ್​ ಪ್ರಸಾತ್​ ಮನೋಹರ್​ ತಿಳಿಸಿದ್ದಾರೆ.

ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ:

ಕೊಳವೆಬಾವಿ ಕೊರೆಯಿಸಲು ಬೇಕಾದ ಅನುಮತಿ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಜಲಮಂಡಳಿ ವೆಬ್​ಸೈಟ್​ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಕೊಳವೆಬಾವಿಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಖಾಸಗಿ ಕೊಳವೆಬಾವಿಗಳಿಗೆ ಅಂತರ್ಜಲ ಮಟ್ಟ, ಅವಶ್ಯಕತೆ ಹಾಗೂ ತರ ವರದಿ ಆಧರಿಸಿ ಸ್ಥಳ ಪರಿಶೀಲಿಸಿದ ಬಳಿಕ ನಿಯಮಾನುಸಾರ ಸೂಕ್ತ ಪ್ರಾಧಿಕಾರದಿಂದ ಅನುಮತಿ ನೀಡಲಾಗುತ್ತಿದೆ.

ವಾರಾಂತ್ಯದಲ್ಲಿ ಅಧಿಕ:

ವಾರಾಂತ್ಯದ ದಿನಗಳಲ್ಲಿ ಹಾಗೂ ನಗರದ ಹೊರವಲಯದಲ್ಲಿ ರಾತ್ರಿ ಅನಧಿಕೃತವಾಗಿ ಕೊಳವೆಬಾವಿ ಕೊರೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಕೊಳವೆಬಾವಿ ಕೊರೆಸಲು ಪ್ರಾಧಿಕಾರದಿಂದ ಅನುಮತಿ ಪಡೆಯತಕ್ಕದ್ದು. ಇಲ್ಲದಿದ್ದರೆ ಕೊಳವೆಬಾವಿ ಕೊರೆಯಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ.
- ಡಾ.ರಾಮ್​ ಪ್ರಸಾತ್​ ಮನೋಹರ್​, ಜಲಮಂಡಳಿ ಅಧ್ಯಕ್ಷ

ಕೈಗಾರಿಕೆಗಳಿಗೆ ಸಂಸ್ಕರಿಸಿದ ನೀರು

ಸಂಸ್ಕರಿಸಿದ ನೀರಿನ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ದೇಶದಲ್ಲೆ ಮೊದಲ ಬಾರಿಗೆ ಕೈಗಾರಿಕೆಗಳಿಗೆ ಪ್ರತ್ಯೇಕ ಪೈಪ್​ಲೈನ್​ ಮೂಲಕ ಸಂಸ್ಕರಿಸಿದ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಜಲಮಂಡಳಿ ಚಿಂತನೆ ನಡೆಸುತ್ತಿದೆ ಎಂದು ಡಾ.ವಿ. ರಾಮ್​ ಪ್ರಸಾತ್​ ಮನೋಹರ್​ ತಿಳಿಸಿದ್ದಾರೆ. ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ವೇಳೆ ಮಾಹಿತಿ ನೀಡಿದರು. ನಗರದಲ್ಲಿ 1,480 ಎಂಎಲ್​ಡಿ ತ್ಯಾಜ್ಯ ನೀರು ಉತ್ಪಾದನೆಯಾಗುತ್ತಿದೆ. ಪ್ರಸ್ತುತ 1,212 ಎಂಎಲ್​ಡಿ ನೀರನ್ನು ಶುದ್ಧೀಕರಿಸಲಾಗುತ್ತಿದೆ. ಇದರ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಲಮಂಡಳಿ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಪ್ರತ್ಯೇಕ ಪೈಪ್​ಲೈನ್​ ಮೂಲಕ ಕೈಗಾರಿಕೆಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮಾಸಾಂತ್ಯವರೆಗೆ ಏರೇಟರ್​ ಅಳವಡಿಸಿ

ಸಾರ್ವಜನಿಕ ಹಿತದೃಷ್ಟಿಯಿಂದ ನಲ್ಲಿಗಳಿಗೆ ್ಲೋ ರಿಸ್ಟ್ರಿಕ್ಟರ್​/ ಏರೇಟರ್​ ಸಾಧನ ಅಳವಡಿಸಿಕೊಳ್ಳಲು ನಿಗದಿಪಡಿಸಿದ್ದ ಅಂತಿಮ ದಿನವನ್ನು ಈ ತಿಂಗಳು ಅಂತ್ಯದವರೆಗೆ ವಿಸ್ತರಿಸಿ ಬೆಂಗಳೂರು ಜಲಮಂಡಳಿ ಆದೇಶಿಸಿದೆ. ಮಾಲ್​, ವಾಣಿಜ್ಯ ಸಂಕೀರ್ಣ, ಅಪಾರ್ಟ್​ಮೆಂಟ್​, ಸರ್ಕಾರಿ ಕಟ್ಟಡ, ಹೋಟೆಲ್​ ಸೇರಿದಂತೆ ವಿವಿಧ ಕಡೆಗಳಲ್ಲಿ ಕಡ್ಡಾಯವಾಗಿ ನಲ್ಲಿಗಳಿಗೆ ಮಾ. 31ರ ಒಳಗಾಗಿ ಏರೇಟರ್​ ಅಳವಡಿಸಬೇಕು. ನಿಗದಿತ ದಿನದೊಳಗೆ ಈ ಸಾಧನ ಅಳವಡಿಸದಿದ್ದರೆ ಮಂಡಳಿಯು ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣದಲ್ಲಿ ಶೇ.50ರ ವರೆಗೆ ಕಡಿತಗೊಳಿಸಲಾಗುತ್ತದೆ. ಜತೆಗೆ 5 ಸಾವಿರ ರೂ. ದಂಡ ವಿಧಿಸುವುದಾಗಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net