ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಜಲಮಂಡಳಿ ಜತೆ ಕೈಜೋಡಿಸಿದ ಬೆಂಗಳೂರು ಟ್ರಾಫಿಕ್‌ ಪೊಲೀಸ್‌

BWSSB (1)
Published on

ಬೆಂಗಳೂರು: ಕಾವೇರಿ 5 ನೇ ಹಂತದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಲಮಂಡಳಿಗೆ ಅಗತ್ಯ ಸಹಕಾರ ನೀಡುವುದಾಗಿ ಬೆಂಗಳೂರು ಟ್ರಾಪಿಕ್‌ ಪೊಲೀಸ್‌ ಭರವಸೆ ನೀಡಿದ್ದಾರೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಂ.ಎನ್. ಅನುಚೇತ್‌ ಅವರೊಂದಿಗೆ ಸಭೆ ನಡೆಸಿ, ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಹಾಗೂ ಆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸಂಚಾರ ವಿಭಾಗದಿಂದ ಅಗತ್ಯವಿರುವ ಸಹಕಾರದ ಬಗ್ಗೆ ಚರ್ಚೆ ನಡೆಸಿದರು.

ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಸಹಕಾರ

ವಜ್ರಹಳ್ಳಿ 100 ಫೀಟ್‌ ರಸ್ತೆಯಿಂದ ಕನಕಪುರ ಮುಖ್ಯ ರಸ್ತೆಯಲ್ಲಿ 112 ಮೀಟರ್‌ಗಳ ಪೈಪ್‌ ಲೈನ್‌ ಅಳವಡಿಸುವ ಕಾರ್ಯ, ಬನ್ನೇರುಘಟ್ಟ ಮುಖ್ಯ ರಸ್ತೆಯಿಂದ ಅಂಜನಾಪುರ 80 ಫೀಟ್‌ ರಸ್ತೆಯಲ್ಲಿ ಕಾಮಗಾರಿ, ಬನ್ನೇರುಘಟ್ಟ ಮುಖ್ಯರಸ್ತೆಯಿಂದ ಕೊಲಿಫಾರಂ ಗಾರೆ ರಸ್ತೆ ಜಂಕ್ಷನ್‌ ನಲ್ಲಿ ನಡೆಸಬೇಕಾಗಿರುವ 78 ಮೀಟರ್‌ಗಳ ಪೈಪ್‌ ಲೈನ್‌ ಅಳವಡಿಕೆಯ ಕಾರ್ಯ, ಬಸಾಪುರ ಮುಖ್ಯ ರಸ್ತೆಯಲ್ಲಿ ಅಳವಡಿಸಬೇಕಾಗಿರುವ 394 ಮೀಟರ್‌ ಪೈಪ್‌ಲೈನ್‌ ಕಾಮಗಾರಿ, ಹೊಸ ರೋಡ್‌ ಜಂಕ್ಷನ್‌ ನಲ್ಲಿ 1.60 ಎಂ ಡಯಾ ಎಮ್‌ ಪೈಪ್‌ಲೈನ್‌ ಅಳವಡಿಕೆಯ ಕಾರ್ಯ, ಕುಡ್ಲು ರಸ್ತೆಯಲ್ಲಿ 200 ಮೀಟರ್‌ ಪೈಪ್‌ ಲೈನ್‌ ಅಳವಡಿಸುವ ಕಾರ್ಯ, ಮುನ್ನೇಕೊಳ್ಳಾಲ್‌ - ಹೆಚ್‌ ಎಎಲ್‌ ರಸ್ತೆಯ ಜಂಕ್ಷನ್ ನಲ್ಲಿ 450 ಮೀಟರ್‌ ಪೈಪ್‌ಲೈನ್‌ ಅಳವಡಿಕೆಯ ಕಾರ್ಯದ ಬಗ್ಗೆ ಚರ್ಚಿಸಲಾಯಿತು.

ಇವುಗಳಲ್ಲಿ ಬಹುತೇಕ ಕಾರ್ಯಗಳಿಗೆ ಈಗಾಗಲೇ ಬೆಂಗಳೂರು ಸಂಚಾರ ವಿಭಾಗ ಕಾಮಗಾರಿ ಪೂರ್ಣಗಳಿಸಲು ಅಗತ್ಯ ಸಹಕಾರ ನೀಡುತ್ತಿದೆ. ಇನ್ನು ಕೆಲವು ರಸ್ತೆಗಳಲ್ಲಿ ಸಂಚಾರವನ್ನು ನಿಲ್ಲಿಸುವ ಹಾಗೂ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇಂದು ವಿಸ್ತ್ರುತವಾಗಿ ಚರ್ಚಿಸಲಾಯಿತು. ಬೆಂಗಳೂರು ಸಂಚಾರ ವಿಭಾಗ ಇದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆಯನ್ನು ನೀಡಿದ್ದು, ಏಪ್ರಿಲ್‌ ತಿಂಗಳಾಂತ್ಯಕ್ಕೆ ಪೈಪ್‌ಲೈನ್‌ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net