More

    ಸಂಸ್ಕರಿಸಿದ ನೀರಿನ ಬಳಕೆಯಲ್ಲಿ ಬೆಂಗಳೂರು ಜಲಮಂಡಳಿ ದೇಶಕ್ಕೆ ಮಾದರಿ; ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಪ್ರಶಂಸೆ

    ಬೆಂಗಳೂರು: ಸಂಸ್ಕರಿಸಿದ ನೀರಿನ ಸದ್ಬಳಕೆಯಲ್ಲಿ ಬೆಂಗಳೂರು ಜಲಮಂಡಳಿ ದೇಶಕ್ಕೆ ಮಾದರಿಯಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ ಪ್ರಶಂಸೆಗೆ ಪಾತ್ರವಾಗಿದೆ.

    ನಗರದ ಸಂಸ್ಕರಿಸಿದ ನೀರಿನ ಬಳಕೆಯ ಬಗ್ಗೆ ಹಾಗೂ ಅದರಿಂದ ಆಗಿರುವ ಪರಿಣಾಮಗಳ ಬಗ್ಗೆ ಮಾಹಿತಿ ಪಡೆಯಲು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ಡಿ.ತಾರಾ ವೀಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊಂದಿಗೆ ಸಭೆ ನಡೆಸಿದರು.

    ಸಂಸ್ಕರಿಸಿದ ನೀರಿನ ಸದ್ಬಬಳಕೆಯಲ್ಲಿ ದೇಶಕ್ಕೆ ಮಾದರಿ

    ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೆಂಗಳೂರು ನಗರದ 1.3 ಕೋಟಿ ಜನರಿಗೆ ನೀರು ಒದಗಿಸುವ ಕಾರ್ಯದಲ್ಲಿ ತೊಡಗಿದೆ. ಬೆಂಗಳೂರು ನಗರದಲ್ಲಿ 1,480 ಎಂಎಲ್​ಡಿ ತ್ಯಾಜ್ಯ ನೀರು ಉತ್ಪಾದನೆ ಆಗುತ್ತದೆ. 1,381 ಎಂಎಲ್​ಡಿ ನೀರನ್ನು ಶುದ್ಧಿಕರಿಸುವ ಸೌಕರ್ಯ ಈಗಾಗಲೇ ನಿರ್ಮಿಸಲಾಗಿದ್ದು, ಪ್ರಸ್ತುತ 1,212 ಎಂಎಲ್​ಡಿ ತ್ಯಾಜ್ಯ ನೀರನ್ನು ಶುದ್ಧಿಕರಿಸಲಾಗುತ್ತಿದೆ. ಇದರ ಬಹುಪಾಲು 850 ಎಂಎಲ್​ಡಿ ನೀರನ್ನು ಸದ್ಬಳಕೆ ಮಾಡಲಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

    ಎನ್​ಜಿಟಿ ಮಾನದಂಡಗಳ ಆಧಾರದ ಮೇಲೆ ಶುದ್ಧಿಕರಣ ನಡೆಸಲಾಗುತ್ತಿದೆ. ಇದರಿಂದ ಉತ್ಪತ್ತಿಯಾಗುವ ಸಂಸ್ಕರಿಸಿದ ನೀರನ್ನು ಸದ್ಬಳಕೆ ಮಾಡುವ ಮೂಲಕ ಬೆಂಗಳೂರು ನಗರದ ಸಾರಕ್ಕಿ ಕೆರೆ, ಅಗರಮ್ ಕೆರೆ, ವೇಂಗಯ್ಯನ ಕೆರೆ, ನಾಯಂಡ ಹಳ್ಳಿ ಕೆರೆ, ಮಾದವಾರ ಕೆರೆ, ಚಿಕ್ಕ ಬಾಣಾವರ ಕೆರೆ, ಕಲ್ಕೆರೆ ಕೆರೆ, ಅಲ್ಲಾಸಂದ್ರ ಕೆರೆ, ಜಕ್ಕುರು ಕೆರೆ, ಮಡಿವಾಳ ಕೆರೆ, ಹುಳಿಮಾವು ಕೆರೆ, ಎಲೆ ಮಲ್ಲಪ್ಪ ಚೆಟ್ಟಿ ಕೆರೆ, ಹಲಸೂರು ಕೆರೆ, ಮಾದವಾರ ಕೆರೆ, ಕೆಂಗೇರಿ ಕೆರೆ ಸೇರಿದಂತೆ 20 ಕೆರೆಗಳನ್ನು ತುಂಬಿಸಲಾಗುತ್ತಿದೆ. ಇದರಿಂದ ಆಯಾ ಪ್ರದೇಶದ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆ ಕಂಡಿದೆ ಎಂದು ವಿವರಿಸಿದರು.

    ಸಂಸ್ಕರಿಸಿದ ನೀರಿನ ಸಮರ್ಪಕ ಬಳಕೆಯಿಂದಬೆಂಗಳೂರು ನಗರದ ನೀರಿನ ಕೊರತೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದಾಗಿದೆ. 850 ಎಂಎಲ್​ಡಿ ಸಂಸ್ಕರಿಸಿದ ನೀರನ್ನು ಮರುಬಳಕೆ ಮಾಡುತ್ತಿದ್ದೇವೆ. ಇನ್ನುಳಿದ 271 ಎಂಎಲ್​ಡಿಯಷ್ಟು ಸಂಸ್ಕರಿಸಿದ ನೀರನ್ನು ಸಮರ್ಪಕವಾಗಿ ಬಳಸಲು ಈಗಾಗಲೇ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಪ್ರಶಂಸಿಸಿರುವುದು ನಮ್ಮ ಮಂಡಳಿಯ ಉತ್ತಮ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬೆಂಗಳೂರಿನಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts