More

    ಕೆರೆಗಳ ಅಭಿವೃದ್ಧಿಗೆ ಬಿಬಿಎಂಪಿ ದಿವ್ಯ ನಿರ್ಲಕ್ಷ್ಯ

    ಆರ್​​.ತುಳಸಿಕುಮಾರ್​

    ಬೆಂಗಳೂರು: ರಾಜಧಾನಿಯಲ್ಲಿ ಕುಡಿಯುವ ನೀರಿನ ಬವಣೆ ಬಿಗಡಾಯಿಸಿರುವ ಸಮಯದಲ್ಲೇ ಬಹುತೇಕ ಕೆರೆಗಳಲ್ಲಿ ನೀರಿನ ಸಂಗ್ರಹ ಕುಸಿತ ಕಂಡಿದೆ. ಈ ಪರಿಸ್ಥಿತಿಯಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಿ ಮುಂದಿನ ವರ್ಷಕ್ಕೆ ಸಮಸ್ಯೆ ನಿವಾರಿಸಬೇಕಿದ್ದ ಬಿಬಿಎಂಪಿ, ಮೂಲಸೌಕರ್ಯ ಯೋಜನೆಗಳಿಗೆ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆಯೆ ಹೊರತು ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದೆ ಜಾಣಮರೆವಿಗೆ ಜಾರಿದಂತಿದೆ.

    ಕಳೆದೊಂದು ದಶಕದಿಂದ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳನ್ನು ಕಾಲಮಿತಿಯೊಳಗೆ ಅಭಿವೃದ್ಧಿಪಡಿಸುವುದಾಗಿ ರಾಜ್ಯ ಸರ್ಕಾರ ಹೇಳುತ್ತಲೇ ಬಂದಿದೆ. ಬಿಬಿಎಂಪಿ ಕೂಡ ಇದೇ ಮಾತನ್ನು ಪುನರುಚ್ಚರಿಸುತ್ತಿದೆ. ಆದರೆ, ಭರವಸೆ ಕಾಗದದಲ್ಲೇ ಉಳಿದಿದೆ. ಕಾರ್ಯರೂಪಕ್ಕೆ ತರಲು ಇಚ್ಛಾಶಕ್ತಿ ಪ್ರದರ್ಶಿಸದ ಕಾರಣ ಕೆರೆಗಳು ಅವಸಾನದತ್ತ ಮುಖ ಮಾಡಿವೆ.

    ಇದರ ಹೊರತಾಗಿಯೂ ಸರ್ಕಾರ ನಗರದಲ್ಲಿ ಹರಿಯುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ನೆರೆಯ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೆರೆ ತುಂಬಿಸುವ ಯೋಜನೆಗೆ ಆದ್ಯತೆ ನೀಡಿದೆ. ಇದಕ್ಕಾಗಿ ಕೋಟ್ಯಂತರ ರೂ. ಹಣ ವೆಚ್ಚ ಮಾಡುತ್ತಿರುವ ಕಾರಣ ರಾಜಧಾನಿಯ ಕೆರೆಗಳ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ. ಲಭ್ಯ ಅಲ್ಪಸ್ವಲ್ಪ ಹಣದಲ್ಲೇ ಪಾಲಿಕೆ ನಿರ್ವಹಣೆ, ಬೇಲಿ ನಿರ್ಮಾಣ ಹಾಗೂ ಇತರ ಸಣ್ಣಪುಟ್ಟ ಕಾಮಗಾರಿಗಳತ್ತ ಲಕ್ಷ್ಯ ವಹಿಸಿದೆ. ಹೀಗಾಗಿ ಕೆರೆ ಅಭಿವೃದ್ಧಿ ಯೋಜನೆ ಹಳ್ಳ ಹಿಡಿದಿದೆ ಎಂಬ ಆಕ್ಷೇಪ ಪರಿಸರವಾದಿಗಳೇ ದೂರಿದ್ದಾರೆ.

    ಪಾಲಿಕೆ ಸುಪರ್ದಿಯಲ್ಲಿವೆ 202 ಕೆರೆ:

    ಬಿಬಿಎಂಪಿ ವ್ಯಾಪ್ತಿಯಲ್ಲಿ 205 ಕೆರೆಗಳಿವೆ. ಇವುಗಳಲ್ಲಿ, ಬೆಳ್ಳಂದೂರು ಕೆರೆ, ವರ್ತೂರು ಕೆರೆ ಹಾಗೂ ವೀರಸಂದ್ರ ಕೆರೆ ಹೊರತುಪಡಿಸಿ ಉಳಿದ 202 ಕೆರೆಗಳು ಪಾಲಿಕೆ ಸುಪರ್ದಿಯಲ್ಲಿವೆ. ಇಷ್ಟೂ ಕೆರೆಗಳ ಪೈಕಿ 114ಅನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. 35 ಕೆರೆಗಳ ಅಭಿವೃದ್ಧಿ ವಿವಿಧ ಹಂತದಲ್ಲಿವೆ. 13 ಕೆರೆಗಳ ಪುನಶ್ಚೇತನಕ್ಕೆ ಟೆಂಡರ್ ಆಹ್ವಾನಿಸಲು ಸಿದ್ಧತೆ ನಡೆದಿದೆ. 35 ಕೆರೆಗಳು ಅಭಿವೃದ್ಧಿಗೆ ಬಾಕಿ ಉಳಿದಿದ್ದು, 19 ಕೆರೆಗಳು ತನ್ನ ಮೂಲ ಸ್ವರೂಪ ಕಳೆದುಕೊಂಡು ಅನ್ಯ ಉದ್ದೇಶಕ್ಕೆ ಬಳಕೆಯಲ್ಲಿವೆ. ಅಂದರೆ ಪಾಲಿಕೆ ಈವರೆಗೆ ಶೇ.55ರಷ್ಟು ಕೆರೆಗಳನ್ನು ಮಾತ್ರ ಅಭಿವೃದ್ಧಿಪಡಿಸಿದಂತಾಗಿದೆ (ಬಿಡಿಎ ಅಭಿವೃದ್ಧಿಪಡಿಸಿರುವ ಕೆರೆಗಳು ಸೇರಿ). ಇನ್ನೂ ಪ್ರತಿಶತ 45 ಕೆರೆಗಳನ್ನು ಅಭಿವೃದ್ಧಿಪಡಿಸಬೇಕಿದ್ದು, ಒತ್ತುವರಿ ತೆರವು ಮಾಡದಿರುವುದು ಹಾಗೂ ಅನುದಾನ ಲಭ್ಯತೆ ಇಲ್ಲದೆ ಪಾಲಿಕೆ ಕೈಚೆಲ್ಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮಳೆ ಬೀಳದಿರುವುದು, ಅಂತರ್ಜಲ ಕುಸಿತದಿಂದ ಕೆರೆಗಳು ಇನ್ನಷ್ಟು ಕಳಾಹೀನವಾಗುತ್ತಿವೆ. ಕೆಲವೆಡೆ ಚರಂಡಿ ನೀರನ್ನು ನೇರವಾಗಿ ಕೆರೆಗೆ ಹರಿಯಬಿಟ್ಟಿದ್ದರೂ, ಅದಕ್ಕೆ ತಡೆ ಹಾಕುವ ಕೆಲಸ ಆಗಿಲ್ಲ.

    ಅಭಿವೃಧ್ಧಿ ನೆಪದಲ್ಲಿ ಅನ್ಯ ಉದ್ದೇಶಕ್ಕೆ ಬಳಕೆ:

    2022-23ರಲ್ಲಿ ಪಾಲಿಕೆ ಕೆರೆಗಳ ಅಭಿವೃದ್ಧಿಗಾಗಿ 200 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಈ ಪೈಕಿ ಹಣ ಪೂರ್ಣವಾಗಿ ಬಳಕೆಯಾಗಿಲ್ಲ. 2023-24 ಹಾಗೂ 2024-25ನೇ ಸಾಲಿನಲ್ಲಿ ಕೆರೆ ಪುನಶ್ಚೇತನಕ್ಕೆ ಹಣ ನಿಗದಿಯಾಗಿಲ್ಲ. ಆದರೂ ಹಿಂದೆ ಬಿಡುಗಡೆ ಆಗಿರುವ ಅನುದಾನದಲ್ಲೇ ಕೆರೆಗಳ ನಿರ್ವಹಣೆಗೆ 35.1 ಕೋಟಿ ರೂ., ತಂತಿಬೇಲಿ ನಿರ್ಮಿಸಲು 32.5 ಕೋಟಿ ರೂ. ಹಾಗೂ ಇತರ ಸಣ್ಣಪುಟ್ಟ ಅಭಿವೃದ್ಧಿಗೆ 2 ಕೋಟಿ ರೂ. ಬಳಸಿಕೊಳ್ಳಲಾಗುತ್ತಿದೆ. ಇದರ ಹೊರತಾಗಿಯೂ ಕೆರೆಗಳ ಸೌಂದರ್ಯಿಕರಣಕ್ಕೆ ಒತ್ತು ನೀಡಿರುವ ಪಾಲಿಕೆ ಅಧಿಕಾರಿಗಳು ಆಳಕ್ಕೆ ಹೂಳೆತ್ತಿ ನೀರು ನಿಲ್ಲಿಸುವ ಕಾಮಗಾರಿ ಮಾದರಿಯನ್ನು ಅಳವಡಿಸಿಕೊಳ್ಳದ ಕಾರಣ, ಕೆರೆಗಳಲ್ಲಿ ನೀರು ನಿಲ್ಲದೆ ಬರಿದಾಗುತ್ತಿದೆ. ಇಂತಹ ಅರೆಬರೆ ಕಾಮಗಾರಿಗಳ ಬದಲು ಉದ್ದೇಶ ಈಡೇರುವ ಕಾರ್ಯಕ್ಕೆ ಒತ್ತು ನೀಡಬೇಕಿದೆ ಎನ್ನುತ್ತಾರೆ ಜಲತಜ್ಞರು.

    ಪ್ರಗತಿಯಲ್ಲಿರುವ ಕೆರೆಗಳು:

    ಕೊತ್ತನೂರು ಕೆರೆ, ಸಿಂಗಾಪುರ ಕೆರೆ, ಕಗ್ಗದಾಸಪುರ ಕೆರೆ, ಹೂಡಿ ಗಿಡ್ಡನಕೆರೆ, ಗೌಡನಪಾಳ್ಯ ಕೆರೆ, ಹುಳಿಮಾವು ಕೆರೆ, ಮೇಸಿಪಾಳ್ಯ ಕೆರೆ, ವಸಂತಪುರ ಕೆರೆ, ರಾಂಪುರ ಕೆರೆ, ಗಂಗಶೆಟ್ಟಿಕೆರೆ, ನಾಗರಬಾವಿ ಕೆರೆ, ವೆಂಗಯ್ಯನಕೆರೆ, ವಡೇರಹಳ್ಳಿ ಕೆರೆ, ಅಬ್ಬಿಗೆರೆ ಕೆರೆ, ಚೌಡೇಶ್ವರಿ ಲೇಔಟ್ ಕೆರೆ, ಅರೆಕೆರೆ, ಕೋಣನಕುಂಟೆ ಕೆರೆ, ಬೆಟ್ಟಹಳ್ಳಿ ಕೆರೆ, ಹೊರಮಾವು ಕೆರೆ, ಕೆಂಗೇರಿ ಕೆರೆ, ಶ್ರೀಗಂಧದಕಾವಲ್ ಕೆರೆ, ಮೈಲಸಂದ್ರ ಕೆರೆ, ಅಮೃತಹಳ್ಳಿ ಕೆರೆ, ಶಿವನಹಳ್ಳಿ ಕೆರೆ (ಯಲಹಂಕ), ನೆಲಗೆದರನಹಳ್ಳಿ ಕೆರೆ.

    ಪಾಲಿಕೆ ಸುಪರ್ದಿಯಲ್ಲಿರುವ ಕೆರೆಗಳ ವಿವರ:

    ಒಟ್ಟು ಕೆರೆಗಳು – 202
    ಅಭಿವೃದ್ಧಿಪಡಿಸಿರುವ ಕೆರೆಗಳು – 114
    ಅಭಿವೃದ್ಧಪಡಿಸುತ್ತಿರುವ ಕೆರೆಗಳು – 25
    ಟೆಂಡರ್ ಹಂತದಲ್ಲಿರುವ ಕೆರೆಗಳು – 13
    ಅಭಿವೃದ್ಧಿಗೆ ಬಾಕಿಯಿರುವ ಕೆರೆಗಳು – 31
    ಅನ್ಯ ಉದ್ದೇಶಕ್ಕೆ ಬಳಕೆಯಾದ ಕೆರೆಗಳು – 19

    ನಗರದಲ್ಲಿರುವ ಕೆರೆಗಳನ್ನು ಕಾಲಮಿತಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ದೊಡ್ಡ ಮೊತ್ತದ ಅನುದಾನ ಬಿಡುಗಡೆ ಮಾಡಬೇಕು. ಪುನಶ್ಚೇತನದ ಬಳಿಕ ಸೀವೇಜ್ ನೀರು ಕೆರೆಗೆ ಹರಿಯದಂತೆ ಎಚ್ಚರ ವಹಿಸಬೇಕು. ಕೆರೆಯಲ್ಲಿ ಹೆಚ್ಚು ನೀರು ನಿಲ್ಲುವಂತೆ ಮಾಡುವುದರಿಂದ ಸುತ್ತಲಿನ ಪ್ರದೇಶದ ಬೋರ್‌ವೆಲ್‌ಗಳು ರೀಚಾರ್ಜ್ ಆಗಿ ಅಲ್ಲಿನ ಜನರಿಗೆ ನೀರಿನ ಆಸರೆ ಸಿಗುತ್ತದೆ. ಈ ಕಾರಣಕ್ಕಾಗಿ ಕೆರೆ ಅಭಿವೃದ್ಧಿಗೆ ಆದ್ಯತೆ ಸಿಗಬೇಕು.
    – ಆನಂದ ಮಲ್ಲಿಗವಾಡ, ಕೆರೆ ಸಂರಕ್ಷಣಾ ಕಾರ್ಯಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts