More

    ಮತ ಚಲಾಯಿಸಿ ಸದೃಢ ದೇಶ ನಿರ್ಮಿಸಿ

    ಹೊಸಪೇಟೆ: ಸದೃಢ ದೇಶ ನಿರ್ಮಿಸಲು ಜನಸಾಮಾನ್ಯರಿಗೆ ದೊರೆತ ಅಪೂರ್ವ ಅವಕಾಶವೇ ಮತದಾನ. ಈ ಅಮೂಲ್ಯ ಹಕ್ಕನ್ನು ಯಾರೂ ಕಳೆದುಕೊಳ್ಳದೆ, ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಮತದಾರರು ತಮ್ಮ ಕರ್ತವ್ಯ ಮೆರೆಯಬೇಕು ಎಂದು ಪತಂಜಲಿ ಯೋಗ ಸಮಿತಿಯ ದಕ್ಷಿಣ ಭಾರತದ ವರಿಷ್ಠ ಭವರ್‌ಲಾಲ್ ಆರ್ಯ ಹೇಳಿದರು.

    ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಡಳಿತ, ನಗರಸಭೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಬುಧವಾರ ಮತದಾನ ಜಾಗೃತಿಗೆ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಅರ್ಹ ಮತದಾರರು ತಪ್ಪದೇ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದರು.

    ನಗರಸಭೆ ಆಯುಕ್ತ ಚಂದ್ರಪ್ಪ ಮಾತನಾಡಿ, ಶೇ 100ರಷ್ಟು ಮತದಾನವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಪ್ರಯತ್ನ ಅಗತ್ಯ. ಬಿಸಿಲು, ರಜೆ ಮುಂತಾದ ಯಾವ ಕಾರಣವನ್ನೂ ನೀಡದೆ, ಮೇ 7ರಂದು ಎಲ್ಲರೂ ಮತಗಟ್ಟೆಗೆ ತೆರಳಿ ತಮ್ಮ ಮತ ಚಲಾಯಿಸಬೇಕು ಎಂದರು.

    ಫ್ರೀಡಂ ಪಾರ್ಕ್ ನಿಂದ ಆರಂಭವಾದ ಮತದಾನ ಜಾಗೃತಿ ಬೈಕ್  ರ‍್ಯಾಲಿ, ಕನಕದಾಸ ವೃತ್ತ, ಪಟೇಲ್ ನಗರ, ಅಂಬೇಡ್ಕರ್ ವೃತ್ತ, ಮದಕರಿ ನಾಯಕ ವೃತ್ತ, ಚಿತ್ರಕೇರಿ, ಉಕ್ಕಡ ಕೇರಿ, ಆಕಾಶವಾಣಿ ಈಶ್ವರನಗರ ಮಾರ್ಗವಾಗಿ ಬಳ್ಳಾರಿ ರಸ್ತೆ, ಬಸ್ ಡಿಪೋ, ಸಿದ್ಧಲಿಂಗಪ್ಪ ಚೌಕಿ ಮುಂದಿನಿಂದ ಮೀರಾಲಾಂ ಟಾಕೀಸ್, ಮೂರಂಗಡಿ ಸರ್ಕಲ್, ದೊಡ್ಡ ಮಸೀದಿ ಮೂಲಕ ನಗರಸಭೆ ಆವರಣದಲ್ಲಿ ಕೊನೆಗೊಂಡಿತು.

    ನಗರಸಭೆಯ ಪರಿಸರ ಎಂಜಿನಿಯರ್ ಆರತಿ, ಪತಂಜಲಿಯ ರಾಜ್ಯ ಯುವ ಪ್ರಭಾರಿ ಕಿರಣ್‌ ಕುಮಾರ್, ಬಳ್ಳಾರಿ ಪ್ರಭಾರಿ ರಾಜೇಶ್ ಕರ್ವಾ, ಯೋಗ ಸಾಧಕರಾದ ಬಾಲಚಂದ್ರ ಶರ್ಮಾ, ಶ್ರೀರಾಮ್‌, ಅನಂತ ಜೋಷಿ, ಪ್ರಕಾಶ್ ಕುಲಕರ್ಣಿ, ಅಶೋಕ ಚಿತ್ರಗಾರ್‌, ಮಂಗಳಮ್ಮ, ಚಂದ್ರಿಕಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts