ಹೊಸಪೇಟೆ: ನಗರ ಸೇರಿ ತಾಲೂಕಿನಲ್ಲಿ ಭಾನುವಾರ ಅರ್ಧ ಗಂಟೆಗೂ ಹೆಚ್ಚು ಹೊತ್ತು ಸುರಿದ ಧಾರಾಕಾರ ಮಳೆಯು ಅವಾಂತರ ಸೃಷ್ಟಿಸಿತು.
ಗಾದಿಗನೂರು ಗ್ರಾಮದಲ್ಲಿ ರೈತ ಕೋರಿ ಮಲಿಯಪ್ಪ ಅವರ ಎರಡು ಎತ್ತುಗಳು ಸಿಡಿಲು ಬಡಿದು ಸತ್ತಿವೆ. ಹೊಲದಲ್ಲಿ ಗಿಡದ ಅಡಿ ಕಟ್ಟಿ ಹಾಕಿದ್ದ ವೇಳೆ ಘಟನೆ ನಡೆದಿದೆ. ಜಮೀನಿನಲ್ಲಿ ಬಿತ್ತನೆ ಕಾರ್ಯಕ್ಕೆ ಆಶ್ರಯವಾಗಿದ್ದ ಎತ್ತುಗಳನ್ನು ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ. ಕಮಲಾಪುರದ ಕೆರೆತಾಂಡಾ ಪಕ್ಕದ ಎಂ.ಜಿ.ಜೋಗಯ್ಯ ಅವರ ಹೊಲದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡಿತು. ಬೆಂಕಿಯು ಕಬ್ಬು ಹಾಗೂ ಹೊಲಕ್ಕೆ ಹಾಕಿದ ಮುಳ್ಳಿನ ಬೇಲಿಗೂ ತಗುಲಿತು. ಸ್ಥಳೀಯರು ಬೆಂಕಿ ನಂದಿಸಿದರು. ನಂತರ ಮಳೆ ಹೆಚ್ಚಾಗಿದ್ದರಿಂದ ಮರದಲ್ಲಿನ ಬೆಂಕಿ ಆರಿಹೋಯಿತು.
ಮಳೆಗೆ ಮೊದಲು ಅಬ್ಬರಿಸಿದ ಸಿಡಿಲಿನ ಶಬ್ದಕ್ಕೆ ಮನೆಯಲ್ಲಿದ್ದ ಜನರು ಬೆಚ್ಚಿಬಿದ್ದರು. ಸಿಡಿಲು ಹೊಡೆತಕ್ಕೆ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಜೆಸ್ಕಾಂ ಸಿಬ್ಬಂದಿ ತುರ್ತು ಸೇವೆಯಲ್ಲಿ ತೊಡಗಿದ್ದರು. ಅರ್ಧ ಗಂಟೆಗೂ ಅಧಿಕ ಹೊತ್ತು ಸುರಿದ ಮಳೆ ತಗ್ಗು ಪ್ರದೇಶಗಳಿಗೆ ಚರಂಡಿ ನೀರಿನ ಜತೆ ಮಳೆ ನೀರು ಕೂಡ ಮಿಶ್ರಣವಾಗಿ ಮನೆಗಳಿಗೆ ನುಗ್ಗಿತ್ತು. ಬಿಸಿಲಿನಿಂದ ಸುಡುತ್ತಿದ್ದ ವಿಜಯನಗರ ಜಿಲ್ಲೆಯಲ್ಲಿ ಸುರಿದ ಮಳೆ ತಂಪು ವಾತಾವರಣ ನಿರ್ಮಿಸಿದ್ದು, ತಣ್ಣನೆಯ ಅನುಭೂತಿ ನೀಡುತ್ತಿದೆ.
ಮಿಂದೆದ್ದ ಹಂಪಿ ಐತಿಹಾಸಿಕ ಸ್ಮಾರಕಗಳು
ಮಳೆಗೆ ಹಂಪಿಯ ವೈಭವ ಮತ್ತಷ್ಟು ಇಮ್ಮಡಿಗೊಂಡಿತು. ಮಳೆಯಲ್ಲಿ ಮಿಂದೆದ್ದ ಸ್ಮಾರಕಗಳ ದೃಶ್ಯಗಳು ರಮಣೀಯವಾಗಿತ್ತು. ಮಳೆಯ ಸಿಂಚನದಲ್ಲಿಯೇ ಪ್ರವಾಸಿಗರು ಸ್ಮಾರಕಗಳನ್ನು ವೀಕ್ಷಿಸಿದರು. ಕೃಷ್ಣ ದೇಗುಲ, ಪಾನ್ ಸೂಪಾರಿ ಬಜಾರ್, ಉಗ್ರ ನರಸಿಂಹ, ವಿಜಯವಿಠಲ ದೇವಾಲಯದ ಆವರಣದಲ್ಲಿ ನೀರು ಸಂಗ್ರಹಗೊಂಡಿದೆ. ಮಳೆ ನೀರಿನಲ್ಲಿ ಸ್ಮಾರಕಗಳ ಪ್ರತಿಬಿಂಬ ಗೋಚರಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ