ಹೊಸಪೇಟೆ: ಮಧುಮೇಹ ಎಂಬುದು ರೋಗ ಅಲ್ಲ, ಅದು ಅಶಿಸ್ತು ಜೀವನಕ್ರಮದ ಪ್ರತಿಬಿಂಬವಷ್ಟೇ. ಯೋಗ, ಸರಿಯಾದ ಆಹಾರ ಮತ್ತು ಶಿಸ್ತುಬದ್ಧ ಜೀವನ ಕ್ರಮದಿಂದ ನಮ್ಮನ್ನು ಮಧುಮೇಹ ಬಾಧಿಸದಂತೆ ಮಾಡಬಹುದು ಎಂದು ವೈದ್ಯ ಡಾ.ಎಸ್.ಬಿ.ಹಂದ್ರಾಳ ಹೇಳಿದರು.
ಇಲ್ಲಿನ ಸ್ವಾತಂತ್ರ‍್ಯ ಉದ್ಯಾನದಲ್ಲಿ ಭಾನುವಾರ ಬೆಳಿಗ್ಗೆ ಮಧುಮೇಹ ನಿಯಂತ್ರಣಕ್ಕಾಗಿ ನಡೆದ ವಿಶೇಷ ಯೋಗ ಶಿಬಿರದಲ್ಲಿ ಮಾತನಾಡಿದರು. ಯೋಗ ಪ್ರಾತ್ಯಕ್ಷಿಕೆಗಳ ಮೂಲಕ ಡಯಾಬಿಟಿಸ್ ಅನ್ನು ಹೇಗೆ ದೂರ ಇರಬಹುದು ಎಂಬುದರ ಮಾರ್ಗದರ್ಶನ ನೀಡಿದರು.
ಬದಲಾದ ಜೀವನಶೈಲಿ, ಆಹಾರ ಪದ್ಧತಿ, ಅತಿಯಾದ ತೂಕ, ಒತ್ತಡದ ಜೀವನ, ನಿದ್ರಾಹೀನತೆ, ಅಜೀರ್ಣತೆ, ಮಲಬದ್ಧತೆ ಮೊದಲಾದ ಕಾರಣಗಳಿಂದ ಮಧುಮೇಹ ಉಂಟಾಗುತ್ತದೆ. ಮಧುಮೇಹಕ್ಕೆ ಹೊರಗಿನಿಂದ ಇನ್ಸುಲಿನ್ ತೆಗೆದುಕೊಳ್ಳುವುದು ಅನಿವಾರ್ಯ. ಆದರೆ ಮಧುಮೇಹವನ್ನು ವಿವಿಧ ಯೋಗಾಸನಗಳು, ಮುದ್ರೆ ಸಹಿತ ಪ್ರಾಣಾಯಾಮಗಳು, ಸರಿಯಾದ ಆಹಾರ ಕ್ರಮ, ಶಿಸ್ತಿನ ಜೀವನ ವಿಧಾನದಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದರು.
ಪತAಜಲಿ ಯೋಗ ಸಮಿತಿಯ ಯುವ ರಾಜ್ಯ ಪ್ರಭಾರಿ ಕಿರಣ್ ಕುಮಾರ್, ಪ್ರಮುಖರಾದ ರಾಜೇಶ್ ಕಾರ್ವಾ, ಎಫ್.ಟಿ.ಹಳ್ಳಿಕೇರಿ, ಅನಂತ ಜೋಶಿ. ಶ್ರೀರಾಮ, ಪ್ರಕಾಶ ಕುಲಕರ್ಣಿ, ಮಲ್ಲಿಕಾರ್ಜುನ, ಅಶೋಕ ಚಿತ್ರಗಾರ, ವಿಠೋಬಣ್ಣ, ಶಿವಮೂರ್ತಿ, ಶ್ರೀಧರ, ಮಂಗಳಮ್ಮ, ಪ್ರಮೀಳಮ್ಮ, ವೆಂಕಟೇಶ ಇತರರಿದ್ದರು.