More

    ಕಾವೇರಿ ನೀರು ಪೂರೈಸದಿದ್ದಲ್ಲಿ ಮತದಾನ ಬಹಿಷ್ಕಾರದ ಎಚ್ಚರಿಕೆ !

    ಬೆಂಗಳೂರು: ರಾಜಧಾನಿಯ ಹಲವೆಡೆ ನೀರಿನ ಸಮಸ್ಯೆ ಬಿಗಡಾಯಿಸಿರುವಾಗಲೇ ತಮ್ಮ ವಾಸದ ಪ್ರದೇಶಕ್ಕೆ ಕಾವೇರಿ ನೀರು ಪೂರೈಸದಿದ್ದಲ್ಲಿ ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸುವುದಾಗಿ ಜೆ.ಪಿ.ನಗರ 8ನೇ ಹಂತದ ರಾಯಲ್ ಲೇಕ್‌ ಫ್ರೆಂಟ್ ನಿವಾಸಿಗಳು ಹಾಗೂ ಸೈಟ್‌ದಾರರ ಕಲ್ಯಾಣ ಸಂಘ ನಿಲುವು ಕೈಗೊಂಡಿದೆ.

    ಉತ್ತರಹಳ್ಳಿ ಹೋಬಳಿಯ ಕೊತ್ತನೂರು ಗ್ರಾಮಕ್ಕೆ ಹೊಂದಿಕೊಂಡಂತೆ ಈ ಲೇಔಟ್‌ನಲ್ಲಿ ಸುಮಾರು ಒಂದು ಸಾವಿರ ಮಂದಿ ವಾಸವಿದ್ದು, ಈ ಪೈಕಿ 600 ಮತದಾರರಿದ್ದಾರೆ. ಬಡಾವಣೆ ರಚನೆಯಾಗಿ 15 ವರ್ಷಗಳೇ ಕಳೆಯುತ್ತಾ ಬಂದಿದ್ದರೂ, ಜಲಮಂಡಳಿಯಿಂದ ಕಾವೇರಿ ನೀರು ಸಂಪರ್ಕ ಪಡೆಯಲು ಸಾಧ್ಯವಾಗಿಲ್ಲ. ಈವರೆಗೆ ಬೋರ್‌ವೆಲ್ ನೀರಿನ ಆಶ್ರಯದಲ್ಲೇ ಜೀವನ ಸಾಗಿಸುತ್ತಿದ್ದು, ಬೇಸಿಗೆ ಹಿನ್ನೆಲೆಯಲ್ಲಿ ಬೋರ್‌ವೆಲ್‌ಗಳು ಬತ್ತಿಹೋಗಿವೆ. ಹೀಗಾಗಿ ನೀರಿಗೆ ಪರದಾಟವಿದ್ದು, ಬದಲಿ ವ್ಯವಸ್ಥೆ ಆಗಿಲ್ಲ. ಬಿಬಿಎಂಪಿ, ಬಿಡಬ್ಲುಎಸ್‌ಎಸ್‌ಬಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದರೂ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಈಗ ನೀರು ಪೂರೈಸದಿದ್ದಲ್ಲಿ ಲೋಕಸಭಾ ಎಲೆಕ್ಷನ್‌ನಲ್ಲಿ ಮತದಾನ ಮಾಡುವುದಿಲ್ಲ ಎಂದು ಸಂಘವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

    ಏನಿದು ಸಮಸ್ಯೆ?:

    ಜೆ.ಪಿ.ನಗರ 8ನೇ ಹಂತದಲ್ಲಿರುವ ರಾಯಲ್ ಲೇಕ್‌ ಫ್ರೆಂಟ್ ರೆಸಿಡೆನ್ಸಿ 15 ವರ್ಷಗಳ ಹಿಂದೆಯೇ ಬಡಾವಣೆಯಾಗಿ ರೂಪುಗೊಂಡಿದೆ. ಬಿಡಿಎ ಅನುಮೋದಿತ ಲೇಔಟ್ ಆಗಿದ್ದು, ನೀರು ಹೊರತುಪಡಿಸಿ ಉಳಿದೆಲ್ಲ ಸೌಕರ್ಯವೂ ಇಲ್ಲುಂಟು. ಪ್ರತೀ ಬಾರಿಯ ಚುನಾವಣೆ ಬಂದಾಗಲೂ ಇಲ್ಲಿನ ನಿವಾಸಿಗಳು ರಾಜಕೀಯ ಪಕ್ಷಗಳ ಮುಖಂಡರಿಗೆ ನೀರು ಪೂರೈಕೆ ಸಮಸ್ಯೆ ಬಗ್ಗೆ ತಿಳಿಸಿದರೂ ಪರಿಹಾರ ಸಿಕ್ಕಿಲ್ಲ. ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾವೇರಿ ನೀರು ಪೂರೈಕೆಯ ಶುಲ್ಕ ಪಾವತಿಸಿದರೆ ಕೊಳವೆ ಸಂಪರ್ಕ ಕಲ್ಪಿಸುವುದಾಗಿ ಜಲಮಂಡಳಿ ತಿಳಿಸಿತ್ತು. ಆದರೆ, ಎರಡು ಹಂತದ ಲೇಔಟ್‌ಗೆ ಒಟ್ಟು 2.34 ಕೋಟಿ ರೂ. ಮೊತ್ತ ಪಾವತಿಸುವಂತೆ ಡಿಮಾಂಡ್ ನೋಟಿಸ್ ನೀಡಲಾಗಿದೆ. ಈಗಾಗಲೇ ಲೇಔಟ್ ಅಧಿಕೃತವಾಗಿದ್ದು, ವಿವಿಧ ಶುಲ್ಕ, ತೆರಿಗೆ ಪಾವತಿಸಿರುವಾಗ ಪೈಪ್‌ಲೇನ್ ಖರ್ಚು ಭರಿಸಲು ಇಷ್ಟೊಂದು ದುಬಾರಿ ಹಣ ಪಾವತಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದು ಇಲ್ಲಿನ ನಿವಾಸಿಗಳು ಪ್ರಶ್ನಿಸಿದ್ದಾರೆ.

    ನಮ್ಮ ಲೇಔಟ್‌ಗೆ ಕಾವೇರಿ ನೀರು ಪೂರೈಸುವಂತೆ ಬೇಡಿಕೆ ಇಟ್ಟು 15 ವರ್ಷ ಪೂರ್ಣಗೊಂಡಿದ್ದರೂ, ಈವರೆಗೆ ಪರಿಹಾರ ಕಂಡಿಲ್ಲ. ಇದ್ದ ಬೋರ್‌ವೆಲ್‌ಗಳು ಬತ್ತಿಹೋಗಿದ್ದು, ನಿತ್ಯವೂ ದುಬಾರಿ ಹಣ ನೀಡಿ ಟ್ಯಾಂಕರ್ ಮೂಲಕವೇ ಜಲದಾಹ ಪೂರೈಸಿಕೊಳ್ಳುತ್ತಿದ್ದೇವೆ. ಲೇಔಟ್ ಸಮೀಪವೇ ಕೊಳವೆ ಮಾರ್ಗ ಹಾದುಹೋಗಿದ್ದರೂ, ಅದರಿಂದ ಸಂಪರ್ಕ ಕಲ್ಪಿಸಲು ಜಲಮಂಡಳಿ ಮೀನಮೇಷ ಎಣಿಸುತ್ತಿದೆ. ಮೂಲಸೌಕರ್ಯ ಶುಲ್ಕದ ಬದಲು ನೀರಿನ ಸಂಪರ್ಕದ ಶುಲ್ಕ ಕಟ್ಟಲು ಸಿದ್ಧವಿದ್ದು, ಸಬೂಬು ಹೇಳದೆ ನೀರು ಪೂರೈಸಲು ಜಲಮಂಡಳಿ ಮುಂದಾಗಲಿ.
    – ಶ್ರೀನಿವಾಸ್ ಕೆ.ಎಸ್., ರಾಯಲ್ ಲೇಕ್‌ರ್ೆಂಟ್ ರೆಸಿಡೆನ್ಸಿಯ ನಿವಾಸಿ

    ರಾಯಲ್ ಲೇಕ್ ಫ್ರಂಟ್ ರೆಸಿಡೆನ್ಸಿಗೆ ಕಾವೇರಿ ನೀರು ಪೂರೈಕೆ ಕೋರಿ ಜಲಮಂಡಳಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಸಂಸ್ಥೆಯು ಅಗತ್ಯ ಮೂಲಸೌಕರ್ಯ ಅಳವಡಿಸಲು ತಗಲುವ ಶುಲ್ಕದ ಬಗ್ಗೆ ಡಿಮ್ಯಾಂಡ್ ನೋಟೀಸ್ ಮೂಲಕ ವರ್ಷದ ಹಿಂದೆಯೇ ನೀಡಲಾಗಿದೆ. ಇದುವರೆಗೂ ಯಾವುದೇ ರೀತಿಯ ಶುಲ್ಕವನ್ನು ಇಲ್ಲಿನ ನಾಗರಿಕರು ಭರಿಸಿಲ್ಲ. ಶುಲ್ಕ ಭರಿಸಿದಲ್ಲಿ ಜಲಮಂಡಳಿ ಈ ಪ್ರದೇಶಕ್ಕೆ ನೀರು ಸರಬರಾಜು ಮಾಡಲು ಸಿದ್ದವಿದೆ.
    – ಡಾ. ವಿ.ರಾಮ್ ಪ್ರಸಾತ್ ಮನೋಹರ್, ಜಲಮಂಡಳಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts