ಮಂಚದ ವಿಚಾರಕ್ಕೆ ನಡೆದುಹೋಯಿತು ಕೊಲೆ!; ಮಲಗಲು ಮುಂದಾಗಿದ್ದ ಅವರಿಬ್ಬರ ಮಧ್ಯೆ ಹೋದವನನ್ನೇ ಸಾಯಿಸಿಬಿಟ್ಟ..

Vinay
ಆರೋಪಿ ವಿನಯ್
Published on

ಬೆಂಗಳೂರು: ಎಂಥ ಕ್ಷುಲ್ಲಕ ವಿಚಾರಗಳಿಗೆಲ್ಲ ಕೊಲೆಯಾಗಿ ಹೋಗಿಬಿಡುತ್ತದೆ ಎಂದು ಹೇಳಲಿಕ್ಕೇ ಕಷ್ಟ. ಮೊನ್ನೆಮೊನ್ನೆಯಷ್ಟೇ ಬರೀ ಆಮ್ಲೆಟ್ ವಿಚಾರಕ್ಕೆ ಒಂದು ಕೊಲೆಯಾಗಿತ್ತು. ಇದೀಗ ಮಂಚದ​ ಮೇಲೆ ಮಲಗುವಂಥ ಸಣ್ಣ ವಿಚಾರಕ್ಕೂ ಕೊಲೆಯೊಂದು ನಡೆದುಹೋಗಿದೆ. ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎಂಬ ನಾಣ್ಣುಡಿ ಇದೆ. ಆದರೆ ಇಲ್ಲಿ ಇಬ್ಬರ ಜಗಳವೇ ಮತ್ತೊಬ್ಬನಿಗೆ ಕೇಡಾಗಿ ಪರಿಣಮಿಸಿದೆ.

ಹೌದು.. ಕಾಟ್​ ಮೇಲೆ ಮಲಗುವ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಬಿಡಿಸಲು ಹೋದ ಸಂಬಂಧಿಯೊಬ್ಬ ಕೊಲೆಗೀಡಾಗಿದ್ದಾನೆ. ಬೆಂಗಳೂರಿನ ಜೀವನ್​ಬಿಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ವೆಂಕಟೇಶ್ ಎಂಬಾತ ಕೊಲೆಗೀಡಾಗಿದ್ದು, ಆತನ ಸಂಬಂಧಿ ವಿನಯ್ ಕೊಲೆ ಆರೋಪಿ.

ನಿನ್ನೆ ರಾತ್ರಿ 10.30ರ ಸುಮಾರಿಗೆ ಜೀವನ್​ಬಿಮಾನಗರದ ಹನುಮನಗರದಲ್ಲಿ ಸಹೋದರರಾದ ವಿನಯ್-ಮನು ಮಧ್ಯೆ ಜಗಳ ನಡೆಯುತ್ತಿತ್ತು. ಕಾಟ್​ ಮೇಲೆ ಮಲಗುವ ವಿಚಾರವಾಗಿ ನಡೆಯುತ್ತಿದ್ದ ಜಗಳ ಕೇಳಿ ಪಕ್ಕದ ಮನೆಯಲ್ಲಿ ವಾಸವಿದ್ದ ಸಂಬಂಧಿ ವೆಂಕಟೇಶ್​ ಅಲ್ಲಿಗೆ ಬಂದಿದ್ದ.

ಜಗಳವಾಡುತಿದ್ದ ಅಣ್ಣ-ತಮ್ಮಂದಿರನ್ನು ವೆಂಕಟೇಶ್​ ಸಮಾಧಾನ ಪಡಿಸಲು ಮುಂದಾಗಿದ್ದ. ಆಗ ಕುಡಿದ ಅಮಲಿನಲ್ಲಿದ್ದ ವಿನಯ್ ಅಲ್ಲೇ ಇದ್ದ ಗಾಜಿನ ಬಾಟಲ್​ನಿಂದ ವೆಂಕಟೇಶ್​ ಎದೆಗೆ ಚುಚ್ಚಿದ್ದ. ತೀವ್ರ ರಕ್ತಸ್ರಾವವಾಗಿ ವೆಂಕಟೇಶ್​ ಮೃತಪಟ್ಟಿದ್ದು, ಪ್ರಕರಣ ಸಂಬಂಧ ವಿನಯ್​ನನ್ನು ಜೀವನ್​ಬಿಮಾನಗರ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net