ನಡುಬೀದಿಯಲ್ಲಿ ಬಡಿಗೆ ಹಿಡಿದು ಬಡಿದಾಡಿಕೊಂಡ ಕುಟುಂಬಸ್ಥರು; ಆಸ್ತಿಗಾಗಿ ಅಕ್ಕಪಕ್ಕದವರ ಹೊಡೆದಾಟ..

Fight
Published on

ಹಾವೇರಿ: ಎಲ್ಲೆಡೆ ಲಾಕ್​ಡೌನ್ ಇರುವುದರಿಂದ ಜನರು ಸಮಯ ಮೀರಿ ಬೀದಿಗಿಳಿಯತ್ತಿಲ್ಲ. ಆದರೆ ಇಲ್ಲೊಂದು ಕಡೆ ಲಾಕ್​ಡೌನ್ ನಡುವೆಯೂ ಎರಡು ಕುಟುಂಬಗಳ ಸದಸ್ಯರು ನಡುರಸ್ತೆಯಲ್ಲೇ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಸಾರ್ವಜನಿಕರೂ ಹೆಂಗಸರಿಂದ ಬಡಿಗೆ ಏಟು ತಿನ್ನುವಂತಹ ಪರಿಸ್ಥಿತಿ ಉಂಟಾಗಿತ್ತು.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಳ್ಳಿಬೈಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ರವೀಂದ್ರ ಹ್ಯಾಪನವರ ಹಾಗೂ ಭೀಮರಾಮಪ್ಪ ಕಾಡನವರ ಕುಟುಂಬದವರ ನಡುವೆ ನಡುರಸ್ತೆಯಲ್ಲೇ ಹೊಡೆದಾಟ ನಡೆದಿದೆ. ರವೀಂದ್ರ ಹ್ಯಾಪನವರ ಖರೀದಿಸಿದ್ದ ಆಸ್ತಿ ಹಾಗೂ ಮನೆ ವಿಚಾರವಾಗಿ ಈ ಜಗಳ ನಡೆದಿದೆ.

ರವೀಂದ್ರ ಖರೀದಿಸಿರುವ ಜಾಗ ನಮ್ಮದು ಎಂದು ಭೀಮರಾಮಪ್ಪ ನಿನ್ನೆ ಅವರ ಮನೆ ಎದುರಿನ ಖಾಲಿ ಜಾಗದಲ್ಲಿ ಟೆಂಟ್​ ಹಾಕಿದ್ದರು. ಈ ಸಂಬಂಧ ಎರಡೂ ಕುಟುಂಬದವರ ನಡುವೆ ಇಂದು ವಾಗ್ವಾದ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಈ ವೇಳೆ ಎರಡೂ ಕುಟುಂಬಸ್ಥರು ಬಡಿಗೆ ಹಿಡಿದು ಬಡಿದಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ರವೀಂದ್ರ ಹಾಗೂ ಅವರ ಪತ್ನಿ ಮಮತಾಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಪೊಲೀಸರು ಧಾವಿಸಿದ್ದರು. ಆಗ ಕೆಲವರು ಪೊಲೀಸರ ವಿರುದ್ಧವೇ ಹರಿಹಾಯ್ದ ಪ್ರಸಂಗವೂ ನಡೆದಿದೆ. ಹೀಗಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್​ ವಿಧಿಸಲಾಗಿದೆ. ಅಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net