

ಬೆಂಗಳೂರು:ವಿದ್ಯಾರ್ಥಿಗಳಿಗೆ ನೂತನ ಕೌಶಲ ಕಲಿಸಲು,ಸಂಶೋಧನೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ನೆಹರು ಸ್ಟ್ರೀಮ್ ಲ್ಯಾಬ್‌ಗಳ ಸ್ಥಾಪಿಸಲು ಆಲೋಚಿಸಲಾಗಿದೆ ಎಂದು ಸಚಿವ ಎನ್.ಎಸ್.ಭೋಸರಾಜು ಹೇಳಿದ್ದಾರೆ.
ನಗರದ ಜವಾಹರಲಾಲ್ ನೆಹರು ತಾರಾಲಯದ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಿಗೆ ಕುತೂಹಲ, ಸೃಜನಶೀಲತೆ ಮತ್ತು ಕಲ್ಪನೆ ಬೆಳೆಸುವುದು ನೆಹರು ಸ್ಟ್ರೀಂ ಲ್ಯಾಬ್‌ನ ಉದ್ದೇಶ. ಆಧುನಿಕ ಕೌಶಲ ಕಲಿಕೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪಠ್ಯಕ್ರಮ ಅಳವಡಿಸಲಾಗುವುದು. ನೆಹರು ಸ್ಟ್ರೀಂ ಲ್ಯಾಬ್ ಒಂದು ಪ್ರಯೋಗಾಲಯ ಸ್ಥಳ. ವಿಜ್ಞಾನ, ತಂತ್ರಜ್ಞಾನ, ರೊಬೊಟಿಕ್ಸ್, ಪರಿಸರ,ವಿಜ್ಞಾನ, ಖಗೋಳಶಾಸ್ತ್ರ ಮತ್ತು ಗಣಿತ ವಿಷಯಗಳ ಕುರಿತು ಚೆನ್ನಾಗಿ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಲಕರಣೆಗಳೊಂದಿಗೆ ಕೆಲಸ ಮಾಡಲು ಅವಕಾಶ ನೀಡಲಾಗುವುದು ಎಂದರು. ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ವಿಜ್ಞಾನಿಗಳ ಕೊಡುಗೆ ಅಪಾರ. ರಾಜ್ಯದಲ್ಲಿ ಸೈನ್ಸ್ ಸಿಟಿ ಮತ್ತು ಶಾಲಾ ಮಕ್ಕಳಿಗೆ ಟೆಲಿಸ್ಕೋಪ್ ನೀಡಲು ನಮ್ಮ ಸರ್ಕಾರ ಬಜೆಟ್‌ನಲ್ಲಿ ೋಷಿಸಲಾಗಿದೆ. ಇದು ಸದ್ಯದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಭೋಸರಾಜು ತಿಳಿಸಿದರು.
ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ವಿಜ್ಞಾನ ಇಲ್ಲದಿದ್ದರೆ ಪ್ರಪಂಚ ಇಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ನಮಗೆ ಎರಡು ಮುಖ್ಯವಾಗಿದೆ. ನಮ್ಮ ದೇಶ ವಿಜ್ಞಾನ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದೆ. ಇದಕ್ಕೆ ವಿಜ್ಞಾನಿ ಸಿ.ವಿ.ರಾಮನ್ ಕಾರಣೀಭೂತರು. ಪ್ರಪಂಚದಾದ್ಯಂತ ಇವರ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಜಿಲ್ಲಾ ಮಟ್ಟದಲ್ಲಿ ವಿಜ್ಞಾನ ಕೇಂದ್ರಗಳು ಪ್ರಾರಂಭವಾದರೆ ಸ್ಥಳೀಯ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯನ್ಮೂಖವಾಗಿದೆ. ಚಂದ್ರಯಾನ ಯಶಸ್ವಿಗೆ ವಿಜ್ಞಾನಿಗಳೇ ಕಾರಣ. ಬೇರೆ ದೇಶಗಳು ಮಾಡದೆ ಸಾಧನೆಯನ್ನು ನಮ್ಮ ದೇಶ ಮಾಡಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ರಾಷ್ಟ್ರ ಮುಂಚೂಣಿಯಲ್ಲಿದೆ ಎಂದು ಬಣ್ಣಿಸಿದರು.
ದೇಶದಲ್ಲಿ ವಿಜ್ಞಾನ ಕ್ಷೇತ್ರ ಬೆಳೆಯಲು ಭದ್ರ ಅಡಿಪಾಯ ಹಾಕಿಕೊಟ್ಟವರು ಜವಾಹರಲಾಲ್ ನೆಹರು. ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ದೇಶದ ಅಮೋಘ ಸಾಧನೆಗೈದಿದೆ. ವಿಜ್ಞಾನದಲ್ಲಿ ನಿರಂತರವಾಗಿ ಅಧ್ಯಯನ ನಡೆಯುತ್ತದೆ. ಇದರಿಂದಾಗಿ ಹೊಸ ಹೊಸ ವಿಷಯಗಳ ಕಲಿಸಲು ಸಾಧ್ಯವಾಗುತ್ತದೆ. ಶಾಲಾಮಕ್ಕಳು ವಿಜ್ಞಾನ ಬಗ್ಗೆ ಕಲಿಯಲು ಹೆಚ್ಚು ಆಸಕ್ತಿ ಬೆಳೆಸಬೇಕು. ವೈಚಾರಿಕತೆ ಹಾಗೂ ತಾರ್ಕಿಕ ಯೋಚನೆ ಬೆಳೆಸಿಕೊಂಡರೆ ಮೂಡನಂಬಿಕೆಯಿಂದ ನಾವೆಲ್ಲರೂ ಹೊರಬಹುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರ ವಿವಿಧ ಶಾಲೆಗಳಿಂದ ಆಗಮಿಸಿದ್ದ ಮಕ್ಕಳು ನೆಹರು ತಾರಾಲಯಕ್ಕೆ ಭೇಟಿ ನೀಡಿ ಬಾಹ್ಯಾಕಾಶ ಕೌತುಕ ಬಗ್ಗೆ ತಿಳಿದುಕೊಂಡರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕರೂಪ್ ಕೌರ್, ನೆಹರು ತಾರಾಲಯ ನಿರ್ದೇಶಕ ಡಾ.ಬಿ.ಆರ್.ಗುರುಪ್ರಸಾದ್ ಮತ್ತಿತರರಿದ್ದರು.
ಶಾಲೆಗಳಿಗೆ ಮೂಲಸೌಕರ್ಯ:
ರಾಜ್ಯದಲ್ಲಿ 66 ಸಾವಿರ ಶಾಲೆಗಳಿಂದ ಅಂದಾಜು 60 ಲಕ್ಷ ಮಕ್ಕಳು ಇದ್ದಾರೆ. ಶಾಲಾಮಕ್ಕಳಿಗೆ ಸೂಕ್ತ ಸಹಕಾರ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿ. ಹಾಗಾಗಿ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹಲವು ಕಾರ್ಯಕ್ರಮಗಳು ಜಾರಿಗೆ ತರುವ ಜತೆಗೆ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಮಕ್ಕಳ ಅಭ್ಯುದಯಕ್ಕಾಗಿ ಟಿಕಂರಿಂಗ್ ಲ್ಯಾಬ್ ಯೋಜನೆ ರೂಪಿಸಲಾಗುತ್ತಿದೆ.ರಾಜ್ಯದ ಎಲ್ಲ ಶಾಲೆಗಳಿಗೆ ಉಚಿತ ವಿದ್ಯುತ್ ಮತ್ತು ಕುಡಿಯುವ ನೀರುನ್ನು ನಮ್ಮ ಸರ್ಕಾರ ಒದಗಿಸುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ದೇಶದಲ್ಲಿ ಸಿ.ವಿ.ರಾಮನ್‌ನಂಥ ವ್ಯಕ್ತಿಗಳು ಅಪರೂಪಕ್ಕೊಮ್ಮೆ ಹುಟ್ಟುತ್ತಾರೆ.ಇಂಥ ವ್ಯಕ್ತಿ ಹುಟ್ಟಿರುವುದು ನಮ್ಮ ದೇಶದ ಸೌಭಾಗ್ಯ. ವಿಜ್ಞಾನಕ್ಕೆ ಇವರು ಅತ್ಯಂತ ಶ್ರೇಷ್ಠ ಕೊಡುಗೆ ಕೊಟ್ಟಿದ್ದಾರೆ. ಶಾಲಾಮಕ್ಕಳು ಇವರಂತೆ ದೊಡ್ಡ ಸಾಧನೆ ಮಾಡಲು ಮುಂದಾಗಬೇಕು. ಪಾಲಕರು ತಮ್ಮ ಮಕ್ಕಳ ಭವಿಷ್ಯ ರೂಪಿಸಲು ದೊಡ್ಡ ತ್ಯಾಗವನ್ನೇ ಮಾಡುತ್ತಿದ್ದಾರೆ. ಹಾಗಾಗಿ, ಮಕ್ಕಳು ಒಳ್ಳೆಯ ವಿದ್ಯೆ ಕಲಿತು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು. ದೇಶದಲ್ಲಿ ಇನ್ನಷ್ಟು ಪ್ರತಿಭಾವಂತ ವಿಜ್ಞಾನಿಗಳು ಹೊರಬರುವಂತಾಗಬೇಕು.ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದಾಗ ನಾನು, ಶಾಲಾ ಮಕ್ಕಳಿಗೆ ವಿಜ್ಞಾನ ಅಕಾಡೆಮಿ ಸ್ಥಾಪಿಸಿದ್ದವು. ನೆಹರು ತಾರಾಲಯ ಉದ್ಘಾಟಿಸಿದ್ದೆ. ಇದು ಲಕ್ಷಾಂತರ ಮಕ್ಕಳಿಗೆ ಅನುಕೂಲವಾಗಿದೆ.
ಬಸವರಾಜ ಹೊರಟ್ಟಿ, ವಿಧಾನ ಪರಿಷತ್ತು ಸಭಾಪತಿ.