ಸ್ಪರ್ಧೆಗೆ ಅಮಿತ್​ ಷಾ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ, ಚುನಾವಣೆಯಿಂದ ಹಿಂದೆ ಸರಿಯುವ ಮಾತಿಲ್ಲ: ಈಶ್ವರಪ್ಪ

KS Eshwarappa
Published on

ಶಿವಮೊಗ್ಗ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಲು ತಯಾರಾಗಿಯೇ ನಾನು ದೆಹಲಿಗೆ ಹೋಗಿದ್ದೆ. ಆದರೆ ನಾನು ಶಿವಮೊಗ್ಗದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿ ಎಂಬ ಕಾರಣಕ್ಕೆ ಅವರು ಭೇಟಿಯಾಗದೆ ಹಿಂದಿರುಗುವಂತೆ ಮಾಡಿದ್ದಾರೆ. ಅವರ ಚಾಣಾಕ್ಷ ನಡೆಯನ್ನು ನಾನು ಗೌರವಿಸುತ್ತೇನೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಈ ಕುರಿತು ಮಾತನಾಡಿದ ಈಶ್ವರಪ್ಪ, ಅಮಿತ್​ ಷಾ ಅವರು ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಹೀಗಾಗಿ ನಾನು ಚುನಾವಣೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ತಮ್ಮ ನಿಲುವನ್ನು ಪುನರುಚ್ಛರಿಸಿದ್ದಾರೆ.

ಅಮಿತ್ ಷಾ ನಮ್ಮ ನಾಯಕರು. ದೆಹಲಿಗೆ ಕರೆದಾಗ ಅವರಿಗೆ ಗೌರವಕೊಟ್ಟು ಹೋಗಿದ್ದೆ. ಆದರೆ, ಅವರು ಭೇಟೆಯಾಗದೆ ಚುನಾವಣೆಗೆ ಸ್ಪರ್ಧೆ ಮಾಡುವುದಕ್ಕೆ ಅಸ್ತು ಎಂದಿದ್ದಾರೆ. ಹಾಗಾಗಿ ನಾನು ಚುನಾವಣೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಅಮಿತ್ ಷಾ ಅವರು ನನಗೆ ಫೋನ್ ಮಾಡಿದಾಗ ನನ್ನ ಸ್ಪರ್ಧೆಯ ಸ್ಪಷ್ಟ ಉದ್ದೇಶವನ್ನು ತಿಳಿಸಿದ್ದೆ. ರಾಜ್ಯದಲ್ಲಿ ಬಿಜೆಪಿಯ ಶುದ್ಧೀಕರಣ ಅನಿರ್ವಾಯಕ್ಕಾಗಿ ಸ್ಪರ್ಧೆ ಎಂದಿದ್ದೆ. ಪಕ್ಷ ಶುದ್ಧೀಕರಣ, ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ನಾನು ಆಕ್ಷೇಪಿಸಿರುವ ಪ್ರಶ್ನೆಗಳಿಗೆ ಅಮಿತ್ ಷಾ ಬಳಿಯೂ ಯಾವುದೇ ಉತ್ತರ ಇರಲಿಲ್ಲ ಎನ್ನಿಸುತ್ತದೆ. ಹಾಗಾಗಿ ಅವರು ಹೊರಡು ಎಂದಿದ್ದಾರೆ.

Amit Eshwarappa

ಆರ್‌ಎಸ್‌ಎಸ್ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರು ಅಮಿತ್ ಷಾ ಮನೆಗೆ ಭೇಟಿ ಮಾಡಲು ಸೂಚಿಸಿದ್ದರು. ಕಚೇರಿಯಲ್ಲಿ ಅಮಿತ್ ಷಾ ಅವರ ಕರೆ ಬಂದ ಮೇಲೆ ಒಳಗೆ ಕರೆಯುತ್ತೇವೆ. ಅಲ್ಲಿವರೆಗೂ ಕಾಯಿರಿ ಎಂದಿದ್ದರು. ನಂತರ ತಮ್ಮೊಂದಿಗೆ ಭೇಟಿಯ ಅವಶ್ಯಕತೆ ಇಲ್ಲ ಎಂದಿದ್ದಾರೆಂದು ಕಚೇರಿ ಸಿಬ್ಬಂದಿ ತಿಳಿಸಿದರು. ಅದರರ್ಥ ನೀನು ಶಿವಮೊಗ್ಗಕ್ಕೆ ವಾಪಸ್ ಹೋಗಿ ಸ್ಪರ್ಧಿಸಿ ಗೆಲ್ಲು ಎಂಬುದಾಗಿದೆ ಎಂದು ಈಶ್ವರಪ್ಪ ತಮ್ಮ ದೆಹಲಿ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಅಮಿತ್ ಷಾ ಅವರ ನಿರ್ಣಯವನ್ನು ನಾನು ಸ್ವಾಗತಿಸುತ್ತೇನೆ. ಒಂದು ವೇಳೆ ಅವರು ಭೇಟಿಯಾಗಿದ್ದರೆ ಅವರಿಗೆ ಈ ಎಲ್ಲ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದೆ. ಆದರೆ, ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಈ ಮೂಲಕ ನನ್ನ ಸ್ಪರ್ಧೆಗೆ ಭಗವಂತನೇ ಕೃಪೆ ತೋರಿದ್ದು ಆತನ ಅಪೇಕ್ಷೆಯಂತೆ ಸ್ಪರ್ಧೆ ಮಾಡಿ ಗೆದ್ದು ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net