ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್​​ ಜನತೆಗೆ ಮೋಸ ಮಾಡುತ್ತಿದೆ: ಕೆ.ಎಸ್. ಈಶ್ವರಪ್ಪ

KS Eshwarappa
Published on

ಕಲಬುರಗಿ: ಆರ್​ಎಸ್​ಎಸ್​ ನಿಷೇಧಿಸುವುದಾಗಿ ಹೇಳುತ್ತಿರುವ ಸಚಿವ ಪ್ರಿಯಾಂಕ ಖರ್ಗೆ ಇನ್ನು ಬಚ್ಚಾ ಅವನೇನು ಮಾಡಲು ಸಾದ್ಯ ಎಂದು ಬಿಜೆಪಿಯ ಹಿರಿಯ ನಾಯಕ ಕೆ.ಎಸ್​.ಈಶ್ವರಪ್ಪ ಹರಿಹಾಯ್ದಿದ್ದಾರೆ.

ಈ ಕುರಿತು ಮಾತನಾಡಿದ ಈಶ್ವರಪ್ಪ ಆರ್​ಎಸ್​ಎಸ್​ ನಿಷೇಧಿಸುವುದಿಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅದರ ಹೊರತಾಗಿಯೂ ಪ್ರಿಯಾಂಕ ಖರ್ಗೆ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಇನ್ನು ಬಚ್ಚಾ ಅವನೇನು ಮಾಡಲು ಸಾದ್ಯ

ಆರ್​ಎಸ್​ಎಸ್​ ದೇಶಭಕ್ತರ ಸಂಘಟನೆಯಾಗಿದ್ದು ದೇಶದ್ರೋಹಿಗಳಿಗೆ ಸಿಂಹಸ್ವಪ್ನವಾಗಿದೆ. ಯಾವುದೇ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ ಮತ್ತು ದೇಶಾದ್ಯಂತ ಕೋಟ್ಯಂತರ ಕಾರ್ಯಕರ್ತರನ್ನು ಹೊಂದಿದೆ. ಇದರ ಹೊರತಾಗಿಯೂ ನಿಷೇಧಿಸುವುದಾಗಿ ಹೇಳುತ್ತಿರುವ ಸಚಿವ ಪ್ರಿಯಾಂಕ ಖರ್ಗೆ ಇನ್ನು ಬಚ್ಚಾ ಅವನೇನು ಮಾಡಲು ಸಾದ್ಯ ಎಂದು ಕಿಡಿಕಾರಿದ್ದಾರೆ.

ಇನ್ನು ಗ್ಯಾರಂಟಿಗಳ ಅನುಷ್ಠಾನದ ಕುರಿತು ಪ್ರತಿಕ್ರಿಯಿಸಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ದಿನವೇ ಐದು ಭರವಸೆಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್​​ ನಾಯಕರು ಹೇಳಿದ್ದರು. ಇದೀಗ ಎರಡು ಕ್ಯಾಬಿನೆಟ್​ ಸಭೆಗಳು ನಡೆದಿದ್ದರೂ ಇದುವರೆಗೂ ಗ್ಯಾರಂಟಿಗಳಿಗೆ ಅನುಮೋದನೆ ಸಿಕ್ಕಿಲ್ಲ.

ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ನಿರುದ್ಯೋಗಿ ಯುವಕರಿಗೆ ಮಾಸಿಕ ಭತ್ಯೆ ನೀಡುವುದಾಗಿ ಆಶ್ವಾಸನೆ ನೀಡಿತ್ತು. ಆದರೆ, ನಂತರ ಈ ವರ್ಷ ಪಾಸಾದವರಿಗೆ ಮಾತ್ರ ಎಂದು ಹೇಳುವ ಮೂಲಕ ದ್ರೋಹ ಬಗೆದಿದೆ. ಗ್ಯಾರಂಟಿಗಳನ್ನು ನೋಡಿ ಕಾಂಗ್ರೆಸ್​ಗೆ ಜನ ಮತ ಹಾಕಿದ್ದಾರೆ ಹೀಗಾಗಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿಗದ್ದಾರೆ.

ನಾವು ಸುಖಾಸುಮ್ಮನೆ ಎಲ್ಲರನ್ನೂ ಟೀಕಿಸುವುದಿಲ್ಲ ಒಂದು ತಿಂಗಳೂ ಕಾಯ್ದು ನೋಡುತ್ತೇವೆ ಆಗಲೂ ಜಾರಿಯಾಗಲಿಲ್ಲ ಎಂದರೆ ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ ಎಂದು ಕಲಬುರ್ಗಿಯಲ್ಲಿ ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net