ರಾಜ್ಯದಲ್ಲಿ ಶೀಘ್ರವೇ ಹೊಸ ಉದ್ಯೋಗ ನೀತಿ ಜಾರಿ ಎಂದ ಸಿಎಂ: ಏನಿರಲಿದೆ ಇದರಲ್ಲಿ?

CMBommai
Published on

ಬೆಂಗಳೂರು: ರಾಜ್ಯದಲ್ಲಿ ಬರುವ ದಿನಗಳಲ್ಲಿ ಹೊಸದಾಗಿ ಉದ್ಯೋಗ ನೀತಿಯನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಘೋಷಣೆ ಮಾಡಿದ್ದಾರೆ.

ಮೀನುಗಾರಿಕೆ ಇಲಾಖೆಯು ಕಬ್ಬನ್ ಪಾರ್ಕ್‌ನ ಸರ್ಕಾರಿ ಮತ್ಸ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂತನ ಅಕ್ವೇರಿಯಂ ಸ್ಥಾಪನೆ ಸೇರಿ ಇತರೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಇದುವರೆಗೆ ಕೈಗಾರಿಕಾ ನೀತಿ ಇತ್ತು. ಉದ್ಯಮಿಗೆ ಸಬ್ಸಿಡಿ ಸೇರಿ ಹಲವು ಸೌಲಭ್ಯಗಳಿದ್ದವು. ಈಗ ಉದ್ಯೋಗ ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರುತ್ತೇವೆ. ಇದರಡಿ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡುವವರಿಗೆ ಸರ್ಕಾರದಿಂದ ವಿಶೇಷ ಸಬ್ಸಿಡಿ ಸೌಲಭ್ಯ ಸಿಗಲಿದೆ. ಇದರಿಂದ ನಿರುದ್ಯೋಗಿಗಳಿಗೆ ಹೆಚ್ಚು ಉದ್ಯೋಗ ಸಿಗುವ ಜತೆಗೆ ರಾಜ್ಯದಲ್ಲಿ ಆಮೂಲಾಗ್ರವಾಗಿ ಬದಲಾವಣೆ ತರಲಾಗುವುದು ಎಂದು ಸಿಎಂ ಹೇಳಿದರು.

ಮೀನುಗಾರಿಕೆಯಲ್ಲಿ ವಿಪುಲವಾದ ಅವಕಾಶಗಳಿವೆ. ರಾಜ್ಯದಲ್ಲಿ ಹಿಂದೆ ಇನ್‌ಲ್ಯಾಂಡ್ ಫಿಶ್ ತುಂಬಾ ಚೆನ್ನಾಗಿತ್ತು. 10 ವರ್ಷಗಳಲ್ಲಿ ಸ್ಪಷ್ಟವಾದ ನೀತಿಗಳ ಇಲ್ಲದಿರುವ ಹಿನ್ನೆಲೆಯಲ್ಲಿ ಇದಕ್ಕೆ ಧಕ್ಕೆಯಾಗಿದೆ. ಹಾಗಾಗಿ, ಇನ್‌ಲ್ಯಾಂಡ್ ಫಿಶ್‌ಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ರಾಜ್ಯದಲ್ಲಿ ಹೆಚ್ಚು ಉತ್ಪಾದನೆಯಾದರೆ ಸ್ಥಳೀಯರಿಗೆ ಬಹಳ ಲಾಭವಾಗಲಿದೆ ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

ಮೀನುಗಾರಿಕೆ ಉತ್ಪಾದನೆ, ಸಂಸ್ಕರಣಾ ಮತ್ತು ತುರ್ತು ಮೇಲೆ ನಮ್ಮ ಸರ್ಕಾರ ದೃಷ್ಟಿ ಹರಿಸಿದೆ. ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳು ಮತ್ತು ಹಣಕಾಸಿವ ವ್ಯವಸ್ಥೆಯನ್ನು ಜೋಡಿಸಿಕೊಳ್ಳುತ್ತೇವೆ. ಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಕೆರೆಯಂತೆ ರಾಜ್ಯಾದ್ಯಂತ 2,500 ಕೆರೆಯಲ್ಲಿ ಇನ್‌ಲ್ಯಾಂಡ್ ಫಿಶಿಂಗ್ ಫಾರ್ಮ್ ಆರಂಭಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net