ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಐಎಎಸ್​ ಅಧಿಕಾರಿ ಮಂಜುನಾಥ್ ಬಂಧನ

Manjunath J IAS
Published on

ಬೆಂಗಳೂರು: ಭ್ರಷ್ಟಾಚಾರ ಆರೋಪಕ್ಕೀಡಾಗಿ ಮೊನ್ನೆಮೊನ್ನೆಯಷ್ಟೇ ಎತ್ತಂಗಡಿ ಆಗಿದ್ದ ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಅವರನ್ನು ಇಂದು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಮೂಲಕ ಇಂದು ರಾಜ್ಯ ಮತ್ತೊಂದು ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಪಿಎಸ್​ಐ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಎಡಿಜಿಪಿ ಅಮೃತ್ ಪೌಲ್​ ಬಂಧನ ನಡೆದು, ರಾಜ್ಯದ ಜನರು ಕುತೂಹಲದಿಂದ ನೋಡುತ್ತಿದ್ದ ಬೆನ್ನಿಗೇ ಮತ್ತೊಬ್ಬ ಉನ್ನತಾಧಿಕಾರಿಯ ಬಂಧನವಾಗಿದೆ. ಐಎಎಸ್​ ಅಧಿಕಾರಿ ಜೆ. ಮಂಜುನಾಥ್, ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದಾಗ ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿದ್ದರು.

ಭೂವ್ಯಾಜ್ಯ ಸಂಬಂಧ ಮಂಜುನಾಥ್ ಕೆಳ ಹಂತದ ಅಧಿಕಾರಿಗಳ ಮೂಲಕ ಲಂಚ ಪಡೆದ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇವರ ವಿರುದ್ಧ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಇವರನ್ನು ಮೂರನೇ ಆರೋಪಿಯಾಗಿ ಕೇಸು ದಾಖಲಿಸಿಕೊಳ್ಳಲಾಗಿದೆ. ಇದೇ ಕಾರಣಕ್ಕೆ ಇವರನ್ನು ಎರಡು ದಿನಗಳ ಹಿಂದೆ ಎತ್ತಂಗಡಿ ಮಾಡಿ, ಇಂಟೆಗ್ರೇಟೆಡ್​ ಚೈಲ್ಡ್​ ಪ್ರೊಟೆಕ್ಷನ್​ ಸ್ಕೀಮ್​ ಡೈರೆಕ್ಟರ್ ಆಗಿ ವರ್ಗಾವಣೆ ಮಾಡಲಾಗಿತ್ತು. ಅಲ್ಲದೆ ನೂತನ ಜಿಲ್ಲಾಧಿಕಾರಿಯಾಗಿ ಸಂಗಪ್ಪ ಅವರನ್ನು ನೇಮಕ ಮಾಡಲಾಗಿತ್ತು. ಇಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಕಚೇರಿಗೆ ವಿಚಾರಣೆಗೆಂದು ಕರೆಸಿದ್ದ ಅಧಿಕಾರಿಗಳು, ನಂತರ ಇವರನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net